ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?
ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪ್ರವೀಣ್ ದಾರೇಕರ್ ಭವಿಷ್ಯ ನುಡಿದಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದಿರುವ ಮಹಾಯುತಿ ಮೈತ್ರಿಕೂಟದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. 120ಕ್ಕೂ ಹೆಚ್ಚು ಸ್ಥಾನ ಗೆದ್ದು ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಬಿಜೆಪಿ ನಾಯಕರು ಹಠ ಹಿಡಿದಿದ್ದಾರೆ. ಮುಂಬೈನಲ್ಲಿರುವ ಫಡ್ನವೀಸ್ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಫಡ್ನವೀಸ್ ಅವರನ್ನು ಸಿಎಂ ಮಾಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಮಾತನಾಡಿ, ಫಡ್ನವಿಸ್ ಎಂತಹ ಪರಿಸ್ಥಿತಿಯಲ್ಲಿದ್ದರೂ ಸಿಎಂ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ಏಕನಾಥ್ ಶಿಂಧೆ ಅವರ ನಿರ್ಧಾರದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಚುನಾವಣಾ ಪ್ರಚಾರದ ವೇಳೆ ಶಿಂಧೆ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ನಾಯಕರು ಘೋಷಿಸಿದ್ದು, ಹೀಗಾಗಿ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಶಿವಸೇನೆ ಮುಖಂಡರು ಸ್ಪಷ್ಟಪಡಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಶಿಂಧೆ ಪ್ರಮುಖ ಪಾತ್ರ ವಹಿಸಿದ್ದು, ಮರಾಠಾ ಮತಬ್ಯಾಂಕ್ ಅನ್ನು ಮಹಾಯುತಿ ಮೈತ್ರಿಕೂಟದ ಕಡೆಗೆ ತಿರುಗಿಸುವಲ್ಲಿ ಶಿಂಧೆ ಪ್ರಮುಖ ಪಾತ್ರ ವಹಿಸಿದ್ದಾರೆ. ಮೇಲಾಗಿ ಮರಾಠಾ ಮೀಸಲಾತಿ ಹೋರಾಟ ಸಮಿತಿ ನಾಯಕ ಮನೋಜ್ ಝರಂಗಿ ಅವರ ಪ್ರಭಾವ ತಮ್ಮ ಮೈತ್ರಿಯತ್ತ ಬೀಳದಂತೆ ಶಿಂಧೆ ತಂತ್ರ ರೂಪಿಸಿದ್ದಾರೆ. ವಾಸ್ತವವಾಗಿ, ಚುನಾವಣೆಯ ಮೊದಲು ಶಿಂಧೆ ಅವರನ್ನು ಸಿಎಂ ಎಂದು ಬಿಜೆಪಿ ಮಹಾ ವಿಕಾಸ್ ಅಘಾಡಿ ಮೈತ್ರಿ ಪ್ರಚಾರ ನಡೆಸಿದ್ದವು. ಮರಾಠ ಮತಬ್ಯಾಂಕ್ ಜೊತೆಗೆ ಶಿವಸೇನೆಯ ಉದ್ದವ್ ಬಣವನ್ನು ದುರ್ಬಲಗೊಳಿಸುವಲ್ಲಿ ಶಿಂಧೆ ಪ್ರಮುಖ ಪಾತ್ರ ವಹಿಸಿದ್ದರು.
ಈಗ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಮಹಾಯುತಿ ಮೈತ್ರಿಕೂಟದಲ್ಲಿ ಸಿಎಂ ಯಾರಾಗುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.