ಯಾರು ಆ ಈಶ್ವರಪ್ಪ..? : ಬಿಜೆಪಿ ಉಸ್ತುವಾರಿ ರಿಯಾಕ್ಷನ್
ಬೀದರ್: ಲೋಕಸಭಾ ಚುನಾವಣೆಯ ರಣಕಣ ಬಿಸಿಯಾಗಿದೆ. ಶಿವಮೊಗ್ಗದಲ್ಲಂತು ಬಿಜೆಪಿಗೆ ಬಂಡಾಯದ ಬಿಸಿಯೇ ಜೋರಾಗಿದೆ. ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರ ಎದುರು ಕೆ ಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುತ್ತಿದ್ದಾರೆ. ಈಗಾಗಲೇ ಹೈಕಮಾಂಡ್ ನಾಯಕರು ಮನಪರಿವರ್ತನೆ ಮಾಡುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಅದು ಸಾಧ್ಯವಾಗುತ್ತಿಲ್ಲ.
ಈಶ್ವರಪ್ಪ ಬಂಡಾಯವೆದ್ದಿರುವ ಕಾರಣ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದು ಬೀದರ್ ನಲ್ಲಿ ಈಶ್ವರಪ್ಪ ಅವರ ಬಗ್ಗೆ ಕೇಳಿದಾಗ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯನ್ನು ಕೇಳಿದಾಗ, ವ್ಯಂಗ್ಯವಾಗಿಯೇ ಉತ್ತರ ನೀಡಿದ್ದಾರೆ. ಯಾರು ಅದು ಈಶ್ವರಪ್ಪ. ಈಶ್ವರಪ್ಪ ಎಂದರೆ ನನಗೆ ಗೊತ್ತಿಲ್ಲ. ನಾನು ಆ ಹೆಸರಿನ ವ್ಯಕ್ತಿಯನ್ನು ಕಂಡು ಹಿಡಿಯಲ್ಲ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮೋದಿ ಅವರ ಭಾವಚಿತ್ರವನ್ನು ಎಲ್ಲರೂ ಹಾಕಿಕೊಳ್ಳುತ್ತಾರೆ. ನಾಳೆ ಕಾಂಗ್ರೆಸ್, ಡಿಎಂಕೆ ಪಕ್ಷದವರು ಹಾಕಿಕೊಳ್ಳುತ್ತಾರೆ. ಈ ಈಶ್ವರಪ್ಪ ಯಾರು ಅಂತಾನೇ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಕೆ ಎಸ್ ಈಶ್ವರಪ್ಪ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಗನಿಗಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅದು ಬಸವರಾಜ್ ಬೊಮ್ಮಾಯಿ ಅವರ ಪಾಲಾಗಿತ್ತು. ಅಂದಿನಿಂದ ಬಂಡಾಯವೆದ್ದಿರುವ ಈಶ್ವರಪ್ಲ, ಈಗ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿಯೇ ಸ್ಪರ್ಧೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಪ್ರಚಾರಕ್ಕಾಗಿ ಮೋದಿ ಅವರದ್ದೇ ಭಾವಚಿತ್ರವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ವಿರೋಧಕ್ಕೆ 'ಮೋದಿ ಏನು ಅವರಪ್ಪನ ಆಸ್ತಿಯ' ಎಂದೇ ಕೆ ಎಸ್ ಈಶ್ವರಪ್ಪ ಅವರು ತಿರುಗೇಟು ನೀಡಿದ್ದರು.