ನಾವೂ ಕೇಳಿದಾಗ ಅಕ್ಕಿ ಇಲ್ಲ ಅಂದ್ರು... ಚುನಾವಣೆಗಾಗಿ ಅಕ್ಕಿ ಕೊಟ್ಟು.. ಈಗ ನಿಲ್ಲಿಸಿದರು : ಕೇಂದ್ರ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಕಿಡಿ
ಬೆಂಗಳೂರು: ಕೇಂದ್ರ ಸರ್ಕಾರ ಇತ್ತಿಚೆಗಷ್ಟೇ ಭಾರತ್ ಎಂಬ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ದೇಶದಾದ್ಯಂತ ವಿತರಣೆ ಮಾಡಿತ್ತು. ಈಗ ಅಕ್ಕಿಯನ್ನು ನಿಲ್ಲಿಸಿದೆ. ಇದು ಚುನಾವಣೆಗಾಗಿ ಮಾಡಿದ ಕಾರ್ಯ ಎಂದು ಕೇಂದ್ರ ಸರ್ಕಾರದ ಮೇಲೆ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಪುಣ್ಯತಿಥಿ. ವಿಧನಾಸೌಧದ ದ್ವಾರದ ಬಳಿ ಇರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅವರನ್ನು ನೆನೆದು ಗೌರವ ಸಲ್ಲಿಕೆ ಮಾಡಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಅಕ್ಕಿಯ ವಿಚಾರಕ್ಕೆ ಕೇಂದ್ರ ಸರ್ಕಾರ ಮಾಡಿದ್ದನ್ನು ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ಆರಂಭಿಸಿದ್ದ ಭಾರಯ್ ಅಕ್ಕಿ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದಾನೇ ಇದು ಚುನಾವಣೆಗೋಸ್ಕರ ಆರಂಭಿಸಿದ್ದ ಯೋಜನೆ ಎಂಬುದು ಸ್ಪಷ್ಟವಾಗುತ್ತದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅನ್ನ ಭಾಗ್ಯ ಯೋಜನೆಗಾಗಿ ಅಕ್ಕಿಯನ್ನು ಕೇಳಿದಾಗ, ಭಾರತೀಯ ಆಹಾರ ನಿಗಮದಲ್ಲಿ ದಾಸ್ತಾನು ಶೇಖರಣೆ ಇದ್ದರು ನೀಡಲಿಲ್ಲ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಅಕ್ಕಿಯನ್ನು ನೀಡಲಿಲ್ಲ. ಹೀಗಾಗೊ ಜನರಿಗೆ ನಾವೂ ಹೆಚ್ಚುವರಿಯಾಗಿ ಹಣ ನೀಡಬೇಕಾಯಿತು ಎಂದಿದ್ದಾರೆ.
ಇದೇ ವೇಳೆ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರನ್ನು ನೆನೆದು, ಅವರು ದೇಶದ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದ ಮಹಾನ್ ವ್ಯಕ್ತಿ. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ತೀವ್ರ ಆಹಾರದ ಕೊರತೆಯುಂಟಾಗಿ, ಬೇರೆ ದೇಶಗಳ ಮುಂದೆ ಬೇಡಬೇಕಾದ ಪರಿಸ್ಥಿತಿ ಇತ್ತು. ಆದರೆ ಜಗಜೀವನರಾಂ ಅವರು ಹೊಸ ತಳಿಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಆಹಾರ ಭದ್ರತೆಯನ್ನು ಒದವಿಸಿದರು ಎಂದಿದ್ದಾರೆ.