ಶಿವಮೊಗ್ಗ ಗಲಾಟೆ ಬಗ್ಗೆ ಏರುಧ್ವನಿಯಲ್ಲಿ ಪ್ರಶ್ನಿಸಿದ ಮಹಿಳೆಗೆ ಸಚಿವ ಮಧು ಬಂಗಾರಪ್ಪ ಕೊಟ್ಟ ಉತ್ತರವೇನು..?
ಶಿವಮೊಗ್ಗ: ಈದ್ ಮಿಲಾದ್ ವೇಳೆ ಶಿವಮೊಗ್ಗದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳನ್ನು ಭೇಟಿ ಮಾಡಲು ಇಂದು ಸಚಿವ ಮಧು ಬಂಗಾರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸ್ಥಳಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎರಡೂ ಸಮುದಾಯದವರ ಜೊತೆಗೂ ಮಾತನಾಡಿದ್ದಾರೆ.
ಇನ್ನು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರ ಬಳಿಯೂ ಗಾಯಾಳುಗಳ ಆರೋಗ್ಯದ ಮಾಹಿತಿ ಪಡೆದುಕೊಂಡಿದ್ದಾರೆ. ಆದಷ್ಟು ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ವೈದ್ಯರಿಗೂ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ಇದೆ ವೇಳೆ ಶಿವಮೊಗ್ಗದ ಆಸ್ಪತ್ರೆಗೂ ಭೇಟಿ ನೀಡಿದ ಮಧು ಬಂಗಾರಪ್ಪ ಅವರನ್ನ ಮಹಿಳೆಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಮುಸ್ಲಿಂ ಹುಡುಗರ ಮೇಲೆ ಕೇಸ್ ಹಾಕಿರುವುದನ್ನು ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಮಧು ಬಂಗಾರಪ್ಪ ಕೂಡ ಜೋರು ಧ್ವನಿಯಲ್ಲಿಯೇ ಉತ್ತರಿಸಿದ್ದಾರೆ. 144 ಸೆಕ್ಷನ್ ಇದ್ದರು ಕೂಡ ಆತ ಬ್ಯಾರಿಕೇಡ್ ತಳ್ಳಿ ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಕೆಲ ಕಿಡಿಗೇಡಿಗಳು ಬೇಕು ಅಂತಾನೇ ಈ ರೀತಿಯ ಗಲಾಟೆ ಮಾಡಿದ್ದಾರೆ. ಯಾರನ್ನೂ ಇದರಿಂದ ರಕ್ಷಣೆ ಮಾಡುವುದಿಲ್ಲ. ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದೇ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಗಾಯಾಳುಗಳ ಆರೋಗ್ಯ ವಿಚಾರಿಸಿ, ಆಸ್ಪತ್ರೆಯಿಂದ ತೆರಳಿದ್ದಾರೆ. ಮಹಿಳೆ ಪ್ರಶ್ನೆ ಮಾಡುವಾಗ ವಿಡಿಯೋ ಮಾಡುತ್ತಿದ್ದನ್ನು ಗಮನಿಸಿದ ಸಚಿವ ಮಧು ಬಂಗಾರಪ್ಪ ಆ ವಿಚಾರಕ್ಕೆ ಗದರಿದ್ದಾರೆ. ಈಗಾಗಲೇ ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ರಾಜಕಾರಣಿಗಳ ದಂಡು ಬರುತ್ತಿದೆ. ಗಾಯಾಳುಗಳ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದಾರೆ.