ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಯೋಚನೆ ಮಾಡಿ ದೊಡ್ಡಗೌಡರನ್ನ ಭೇಟಿ ಮಾಡಿದರಾ ಯೋಗೀಶ್ವರ್..?
ಬೆಂಗಳೂರು: ಸದಾ ಏಕವಚನದಲ್ಲಿಯೇ ದಾಳಿ ನಡೆಸುತ್ತಿದ್ದ ಸಿಪಿ ಯೋಗೀಶ್ವರ್ ಹಾಗೂ ಕುಮಾರಸ್ವಾಮಿ ಇದೀಗ ದೋಸ್ತಿಗಳಾಗಿದ್ದಾರೆ. ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಒಡನಾಟವೂ ಜೋರಾಗಿದೆ. ನಿನ್ನೆಯಷ್ಟೇ ಸಿ ಪಿ ಯೋಗೀಶ್ವರ್ ಅವರು ಕೂಡ ದೇವೇಗೌಡರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಅದರಲ್ಲೂ ಮಧ್ಯರಾತ್ರಿ ರಹಸ್ಯ ಮಾತುಕತೆ ನಡೆಸಿದ್ದಾರೆ.
ಸಿ ಪಿ ಯೋಗೀಶ್ವರ್ ಅವರ ರಹಸ್ಯ ಭೇಟಿಯಲ್ಲಿ ಒಂದೇ ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಪ್ಲ್ಯಾನ್ ರೂಪಿತವಾಗಿದೆ ಎನ್ನಲಾಗಿದೆ. ಒಂದು ಡಿಕೆ ಶಿವಕುಮಾರ್ ಬ್ರದರ್ಸ್ ಗೆ ಟಕ್ಕರ್ ಕೊಡುವುದು ಹಾಗೂ ಮತ್ತೊಂದು ಚನ್ನಪಟ್ಟಣವನ್ನು ಭದ್ರವಾಗಿ ಉಳಿಸಿಕೊಳ್ಳುವುದೇ ಆಗಿದೆ. ಹೀಗಾಗಿ ಮಧ್ಯರಾತ್ರಿಯಲ್ಲಿ ದೇವೇಗೌಡರ ಬಳಿ ಚರ್ಚೆ ಮಾಡಿದ್ದಾರೆ.
ಸತತ ಎರಡು ಗಂಟೆಗಳ ಕಾಲ ಮಾತನಾಡಿರುವ ಸಿ ಪಿ ಯೋಗೀಶ್ವರ್, ಬೆಂಗಳೂರು ಗ್ರಾಮಾಂತರದ ಬಗ್ಗೆ ಹೆಚ್ಚಿನದಾಗಿ ಮಾತನಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಟಿಕೆಟ್ ಬಿಜೆಪಿಗೆ ಬೇಡ. ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ. ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿದರೆ ಬಹಳ ಸೂಕ್ತ. ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡದೆ ಇದ್ದರೆ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಿ. ಈ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಿದರೆ ಗೆಲುವು ಖಂಡಿತ ಸಿಗಲಿದೆ. ಇಬ್ಬರಲ್ಲಿ ಯಾರೇ ನಿಂತರು ಗೆಲ್ಲಿಸಿಕೊಂಡು ಬರುವ ಜವಬ್ದಾರಿಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಯೋಗೀಶ್ವರ್ ಯೋಚನೆಯೇ ಬೇರೆ ಇದೆ. ಕುಮಾರಸ್ವಾಮಿ ಅವರು ಮಂಡ್ಯ ಅಥವಾ ಗ್ರಾಮಾಂತರದಲ್ಲಿ ಸ್ಪರ್ಧಿಸಿದರೆ ಚನ್ನಪಟ್ಟಣದಲ್ಲಿ ಸ್ಪರ್ಧೆ ಇರುವುದಿಲ್ಲ ಎಂಬುದೇ ಆಗಿದೆ.