ಜೈಲಿನಿಂದ ಬಿಡುಗಡೆಯಾದ ಎಂಎಲ್ಸಿ ಸೂರಜ್ ರೇವಣ್ಣ ಹೇಳಿದ್ದೇನು..?
ಬೆಂಗಳೂರು: ಅಸಹಜ ಲೈಂಗಿಕ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಸೂರಜ್ ರೇವಣ್ಣ ಹೊರ ಬರುತ್ತಿದ್ದಂತೆ ಅವರ ಬೆಂಬಲಿಗರು ಜೈಕಾರ ಹಾಕಿದ್ದಾರೆ. ಜೈಲಿನಿಂದ ಸದ್ಯ ಸೂರಜ್ ರೇವಣ್ಣ ಮನೆಗೆ ತಲುಪಿದ್ದಾರೆ.
ಅದಕ್ಕೂ ಮುನ್ನ ಮಾತನಾಡಿದ ಸೂರಜ್ ರೇವಣ್ಣ, ನಾನೇನು ತಪ್ಪು ಮಾಡಿಲ್ಲ. ತನಿಖಾಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದೀವಿ. ಇದು ನಮ್ಮವಿರುದ್ಧ ಮಾಡಿರುವ ಷಡ್ಯಂತ್ರ. ದೂರು ಕೊಟ್ಟಿರುವ ಶಿವಕುನಾರ್ ನನ್ನ ಆಪ್ತನಲ್ಲ. ನಮಗೆ ಈ ರೀತಿಯ ಕಾರು ಚಾಲಕರು ಯಾರೂ ಇಲ್ಲ. ಎರಡ್ಮೂರು ದಿನವಾಗಲಿ, ಆಮೇಲೆ ಮಾತನಾಡುತ್ತೇನೆ. ಹಾಸನದಲ್ಲಿ ರಾಜಕೀಯವಾಗಿ ನಮ್ಮ ಮೇಲೆ ಪಿತೂರಿ ಮಾಡಿದ್ದಾರೆ. ಇದು ಪೀತೂರಿಯಿಂದಾದ ಕೆಲಸವಷ್ಟೇ ಎಂದಿದ್ದಾರೆ.
ನಮ್ಮ ಕುಟುಂಬದ ಮೇಲೆ ತೇಜೋವಧೆ ಮಾಡಿದ್ದಾರೆ. ಸತ್ಯವನ್ನು ಯಾರೂ ಕೂಡ ಜಾಸ್ತಿ ದಿನ ಮುಚ್ಚಿಡುವುದಕ್ಕೆ ಆಗುವುದಿಲ್ಲ. ತೇಜೋವಧೆ ಮಾಡುವ ಉದ್ದೇಶದಿಂದ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ. ನಾವೂ ಯಾವುದಕ್ಕೂ ಹೆದರಿಕೊಂಡು, ಎಲ್ಲಿಯೂ ಓಡಿ ಹೋಗುವುದಿಲ್ಲ. ಎರಡು ಮೂರು ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ. ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನನಗಿದೆ. ಹಾಗೇ ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವೂ ಇದೆ.
ಇದು ಕೇಸ್ ಅಲ್ಲ ಷಡ್ಯಂತ್ರ.. ಕುತಂತ್ರದ ಕೆಲಸ. ಇದರಿಂದ ಸಂಪೂರ್ಣವಾಗಿ ಹೊರಗೆ ಬರ್ತೀನಿ. ಹಾಸನದಲ್ಲಿ ರೇವಣ್ಣ ಅವರಿಗಾಗಲೀ ನಮಗೆ ಆಗಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ. ರಾಜಕೀಯವಾಗಿ ಹಾಸನದಲ್ಲಿ ನಮ್ಮನ್ನು ಕುಗ್ಗಿಸುವ ತಂತ್ರ ಅಷ್ಟೇ ಇದು ಎಂದು ಸೂರಜ್ ರೇವಣ್ಣ ಜಾಮೀನು ಸಿಕ್ಕ ಬಳಿಕ ಹೊರಗೆ ಬಂದು ಮಾತನಾಡಿದ್ದಾರೆ.