ನಾಳೆ ಸರ್ಕಾರಿ ರಜೆ ಘೋಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ತುಮಕೂರು: ನಾಳೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಇಡೀ ದೇಶದ ಜನ ಭಾಗಿಯಾಗಲಿದ್ದಾರೆ. ಶಾಲಾ-ಕಾಲೇಜು ಮಕ್ಕಳು ಸಹ ರಾಮನ ಆಶೀರ್ವಾದಕ್ಕೆ ಪಾತ್ರರಾಗಲಿ, ಹೀಗಾಗಿ ಸರ್ಕಾರಿ ರಜೆ ಘೋಷಣೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಈ ಸಂಬಂಧ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರಿ ರಜೆ ಘೋಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಾಳೆ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾಳೆ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಆದರೆ ಸರ್ಕಾರಿ ರಜೆ ಇರುವುದಿಲ್ಲ. ದೇವಸ್ಥಾನಗಳಲ್ಲಿ ದಾಸೋಹ, ಪಾನಕ, ಫಲಹಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಳೆ ಮಹದೇವಪುರದಲ್ಲಿ ರಾಮನ ದೇವಸ್ಥಾನ ಉದ್ಘಾಟನೆ ಮಾಡುತ್ತಿದ್ದೇನೆ. ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಉದ್ಘಾಟನೆಗೆ ಹೋಗುತ್ತಿದ್ದೇನೆ ಎಂದಿದ್ದಾರೆ.
ಈಗಾಗಲೇ ಹಲವು ಖಾಸಗಿ ಶಾಲಾ-ಕಾಲೇಜುಗಳಿಗೆ ಪೂರ್ತಿ ರಜೆ ನೀಡಲಾಗಿದೆ. ಇನ್ನು ಕೆಲವು ಶಾಲಾ-ಕಾಲೇಜುಗಳಿಗೆ ಮಧ್ಯಾಹ್ನದ ರಜೆ ನೀಡಿದ್ದಾರೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಯಾವುದೇ ರಜೆ ಘೋಷಣೆ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರ ನೋಡಿಕೊಂಡು ಸೂಚನೆ ನೀಡುವುದಕ್ಕೆ ಕಾಯುತ್ತಿದ್ದರು. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ರಜೆ ಘೋಷಣೆ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.