ಬಿವೈ ವಿಜಯೇಂದ್ರ ಮೀನಿ ಮರಿಯಂತೆ.. ಸಿಎಂ ಆಗುವ ತನಕ ಜೊತೆಗೆ ಇರುತ್ತೀವಿ : ಗೋವಿಂದ ಕಾರಜೋಳ
ಬಾಗಲಕೋಟೆ: ಲೋಕಸಭಾ ಚುನಾವಣೆ ಹತ್ತಿರವಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಮಾಡಿದೆ. ಇದರಿಂದ ಹೊಸದಾಗಿ ಆಯ್ಕೆಯಾದವರ ಮೇಲೆ ಹೆಚ್ಚಿನ ಜವಬ್ದಾರಿ ಇದೆ. ಅದರಲ್ಲೂ ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆಗಾಗಿ ಓಡಾಡುತ್ತಿದ್ದಾರೆ. ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದೀಗ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಬಿವೈ ವಿಜಯೇಂದ್ರ ಅವರನ್ನು ಸಿಎಂ ಮಾಡಿಯೇ ಮಾಡುತ್ತೀವಿ ಎಂಬ ಹಠ ತೊಟ್ಟಿದ್ದಾರೆ.
ಈ ಸಂಬಂಧ ಬಾಗಲಕೋಟೆಯಲ್ಲಿ ಮಾತನಾಡಿರುವ ಗೋವಿಂದ ಕಾರಜೋಳ ಅವರು, ಬಿವೈ ವಿಜಯೇಂದ್ರ ಅವರು ಸಿಎಂ ಆಗುವ ತನಕ ನಾವೂಗಳು ಅವರಿಗೆ ಶಕ್ತಿಯಾಗಿ ನಿಂತುಕೊಳ್ಳುತ್ತೇವೆ. ಬಿವೈ ವಿಜಯೇಂದ್ರ ಅವರು ಮೀನಿನ ಮರಿಯಂತೆ. ಆ ಮೀನಿನ ಮರಿಗೆ ಈಜುವುದನ್ನು ಕಲಿಸುವ ಅಗತ್ಯವಿಲ್ಲ. ಬಿಎಸ್ ಯಡಿಯೂರಪ್ಪ ಅವರಿಗಿಂತ ಒಂದು ಹೆಜ್ಜೆ ಬಿ ವೈ ವಿಜಯೇಂದ್ರ ಅವರು ಮುಂದಿದ್ದಾರೆ ಎಂದು ಹೊಗಳಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕೇವಲ ಭಾವನಾತ್ಮಕ ಸಮಸ್ಯೆ ಸೃಷ್ಠಿ ಮಾಡಿ, ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಬಂದ ಮೇಲೆ ಒಂದೇ ಒಂದು ಕಾಮಗಾರಿಯೂ ನಡೆದಿಲ್ಲ. ಮೊನ್ನೆಯ ಬೆಳಗಾವಿಯ ಅಧಿವೇಶನ ಕೂಡ ಕಾಟಚಾರಕ್ಕೆ ನಡೆದಿದೆ. ಕಷ್ಟಕಾಲದಲ್ಲಿ ರಾಜಕೀಯ ಜೀವನ ನೀಡಿದ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನರ ಋಣ ತೀರಿಸಲು ಅನುದಾನ ನೀಡಬೇಕಿತ್ತು. ಆದರೆ ಒಂದು ರೂಪಾಯಿ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.