ಯತ್ನಾಳ್ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ, ನಮಗೆ ಆ ಅಧಿಕಾರವಿಲ್ಲ : ಡಿವಿ ಸದಾನಂದಗೌಡ
ಬೆಂಗಳೂರು: ಶಾಸಕ ಯತ್ನಾಳ್ ತಮ್ಮದೇ ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅದರಲ್ಲೂ ಕೊರೊನಾ ಸಮಯದಲ್ಲಿ 40 ಸಾವಿರ ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಬಹಿರಂಗವಾಗಿಯೇ ತಿಳಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಅದಕ್ಕೆ ದಾಖಲೆಗಳನ್ನು ನೀಡಿದರೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಇದು ಬಿಜೆಪಿ ನಾಯಕರಿಗೆ ಮುಜುಗರ ತಂದಿದೆ.
ಈ ಸಂಬಂಧ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಈ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ, ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನಮಗೆ ಅಧಿಕಾರವಿಲ್ಲ. ಆದರೆ ಈ ವಿಚಾರವಾಗಿ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ನಿನ್ನೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದೆ. ಆ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆಯೂ ತಿಳಿಸಲಾಗಿದೆ. ಇದೇ ವೇಳೆ ಯತ್ನಾಳ್ ಅವರ ಬಗ್ಗೆಯೂ ವಿಚಾರ ಮುಟ್ಟಿಸಲಾಗಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ನಮಗೆ ಇಲ್ಲ.
ಶಾಸಕರು ಹಾಗೂ ಅದಕ್ಕೂ ಮೇಲ್ಪಟ್ಟ ಯಾರ ಬಗ್ಗೆಯೇ ಕ್ರಮ ತೆಗೆದುಕೊಳ್ಳುವುದಿದ್ದರು ಅದನ್ನು ಹೈಕಮಾಂಡ್ ಅವರೇ ತೆಗೆದುಕೊಳ್ಳಬೇಕು. ನಾವೂ ಏನೇ ಇದ್ದರು ಇಲ್ಲಿನ ಬೆಳವಣಿಗೆಯ ಬಗ್ಗೆ ಮಾಹಿಯನ್ನಷ್ಟೇ ನೀಡಬಹುದು. ಹೀಗಾಗಿ ಯತ್ನಾಳ್ ಅವೆ ಹೇಳಿಕೆಗಳ ಬಗ್ಗೆ ನಾವೂ ಯಾರೂ ಮಾತನಾಡುವುದಿಲ್ಲ. ಕಾಂಗ್ರೆಸ್ ನವರಿಗೆ ಈಗ ಅಧಿಕಾರ ಸಿಕ್ಕು ಆರು ತಿಂಗಳಾಗಿದೆ ಅಷ್ಟೇ. ಅಷ್ಟರಲ್ಲಿಯೇ ಅವರ ಹಣೆ ಬರಹ ಜಗಜ್ಜಾಹೀರಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಪ್ರತಿಯೊಬ್ಬರು ಬೀದಿಗಿಳಿಯಿವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.