ವಕ್ಫ್ ಬೋರ್ಡ್ ವಿವಾದ : ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ..!
ಬೆಂಗಳೂರು: ವಕ್ಫ್ ವಿವಾದ ರಾಜ್ಯದಲ್ಲಿ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ರೈತರಿಗೆ ಕೊಟ್ಟ ನೋಟೀಸ್ ವಾಪಾಸ್ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಿದ್ದಾರೆ. ರೈತರ ಜಮೀನು, ಮಠ, ಗೋಮಾಳದಲ್ಲೂ ವಕ್ಫ್ ಹೆದರು ನಮೂದಾಗಿರುವುದನ್ನು ವಿರೋಧಿಸಿ, ಪ್ರತಿಭಟನೆ ಕೈಗೊಂಡಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವ ವಹಿಸಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ನೇತೃತ್ವ ವಹಿಸಿದ್ದಾರೆ. ಈ ಮೂಲಕ ರೈತರಿಗೆ ಯಾವುದೇ ಅನ್ಯಾಯವಾಗಬಾರದು ಎಂದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ಕರ್ನಾಟಕ ವಕ್ಫ್ ಎಂದು ಸೇರಿಸಲಾಗಿದೆ. ಈ ಸಂಬಂಧ ಈಗಾಗಲೇ ರೈತರಿಗೆ ನೋಟೀಸ್ ಕೂಡ ನೀಡಲಾಗಿತ್ತು. ರೈತರು ದೊಡ್ಡಮಟ್ಟಕ್ಕೆ ಪ್ರತಿಭಟನೆ ಕೂಡ ಮಾಡಿದರು. ರೈತರ ಪ್ರತಿಭಟನೆಗೆ ಮಣಿದ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ವಕ್ಫ್ ಸಂಬಂಧ ರೈತರಿಗೆ ನೀಡಿರುವ ನೋಟೀಸ್ ವಾಪಾಸ್ ಪಡೆಯಲು ಸೂಚಿಸಿದ್ದು, ರೈತರ ಪಹಣಿಯಲ್ಲಿ ವಕ್ಫ್ ಹೆಸರು ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಆದರೆ ಈ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಪಕ್ಷ ತೀರ್ಮಾನಿಸಿದೆ.