ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಉಪರಾಷ್ಟ್ರಪತಿ ಜಗದೀಪ್ ದಂಪತಿ ಭೇಟಿ..!
ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ದೊಡ್ಡ ಗೌಡರ ಮನೆಗೂ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಮಗ, ಮೊಮ್ಮಗ ಎಲ್ಲಾ ಚನ್ನಪಟ್ಟಣದಲ್ಲಿ ಓಡಾಡುತ್ತಿದ್ದಾರೆ. ಇದರ ನಡುವೆ ಕೂಲ್ ಆದ ವಿಚಾರ ಒಂದು ನಡೆದಿದ್ದು, ಮಾಜಿ ಪ್ರಧಾನಿ ದೇವೇಗವಢರ ಮನೆಗೆ ಉಪರಾಷ್ಟ್ರಪತಿ ದಂಪತಿ ಆಗಮಿಸಿದ್ದಾರೆ. ಇವರ ಆಗಮನದಿಂದ ದೊಡ್ಡಗೌಡರ ಮನೆಯಲ್ಲಿ ಖುಷಿಯಾಗಿದ್ದಾರೆ. ಉಪರಾಷ್ಟ್ರಪತಿಗಳಾದ ಜಗದೀಶ್ ಧನಕರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸುಧೇಶ್ ಧನಕರ್ ಆಗಮಿಸಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆತ್ಮೀಯತೆಯಿಂದ ದಂಪತಿಯನ್ನು ಸ್ವಾಗತಿಸಿದರು.
ಕುಮಾರಸ್ವಾಮಿ ಹಾಗೂ ದೇವೇಗೌಡರ ಜೊತೆಯಲ್ಲಿಯೇ ದಂಪತಿ ಊಟ ಮಾಡಿದರು. ಜೊತೆಗೆ ಕೂತು ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಿದರು. ಅದರಲ್ಲೂ ಜಗದೀಪ್ ಧನಕರ್ ಅವರು ದೇವೇಗೌಡರ ಬಳಿ ಅವರ ಪತ್ನಿ ಚನ್ನಮ್ಮ ಅವರ ಆರೋಗ್ಯದ ಬಗ್ಗೆ ವಿಚಾರಸಿದರು. ಬೇಗ ಗುಣಮುಖರಾಗಲಿ ಎಂದು ಹಾರೈಸಿದರು. ಒಮ್ಮೆ ನಿಮ್ಮ ಜೊತೆಗೆ ದೆಹಲಿಗೂ ಕರೆತನ್ನಿ ಎಂದೇ ಹೇಳಿದರು. ಕುಟುಂಬಸ್ಥರು ಕೂತು ಕೊಂಚ ಸಮಯ ಮಾತಾಡಿದ ಮೇಲೆ ಉಪರಾಷ್ಟ್ರಪತಿ ಜಗದೀಪ್ ದಂಪತಿಯನ್ನು ಬೀಳ್ಕೊಟ್ಟರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಉಪರಾಷ್ಟ್ರಪತಿಗಳು ಹಾಗೂ ಮಾಜಿ ಪ್ರಧಾನಿ ದೇವೇಗೌಡರ ನಡುವೆ ಸ್ನೇಹಪೂರ್ವಕ ಬಾಂಧವ್ಯವಿದೆ. ಇಬ್ಬರು ಪರಸ್ಪರ ಗೌರವ ಭಾವ ಇರಿಸಿಕೊಂಡಿದ್ದಾರೆ. ಅದರಲ್ಲೂ ಉಪರಾಷ್ಟ್ರಪತಿಗಳು ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಇದನ್ನು ಅನೇಕ ಸಲ ಕಣ್ಣಾರ ಕಂಡಿದ್ದೇನೆ. ಇಬ್ಬರೂ ನಾಯಕರು ರೈತ ಕುಟುಂಬದಿಂದ ಬಂದವರೆ. ಹೀಗಾಗಿ ಅವರಿಬ್ಬರ ಚರ್ಚೆ ಬಹುತೇಕ ಕೃಷಿ ಕೇಂದ್ರಿತವಾಗಿತ್ತು ಎಂದಿದ್ದಾರೆ.