ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ : ನಾಗೇಂದ್ರ ಪತ್ನಿ ಬಂಧನ..!
ಬೆಂಗಳೂರು: ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಅವರ ಪತ್ನಿಯನ್ನು ಇಡಿ ವಶಕ್ಕೆ ಪಡೆದಿದೆ.
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ವಶಕ್ಕೆ ಪಡೆದಿದ್ದಾರೆ. ಇಡಿ ಅಧಿಕಾರಿಗಳು ಅವರನ್ನು ಶಾಂತಿನಗರದ ಕಚೇರಿಗೆ ಕರೆತಂದಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಕೋಟಿ ಕೋಟಿ ಹಣ ಟ್ರಾನ್ಸ್ ಫರ್ ಆಗಿರಯವ ಬಗ್ಗೆ ಮಂಜುಳಾ ಅವರ ಬಳಿಯೂ ತನಿಖೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ದೊಡ್ಡ ಮಟ್ಟದ ಹಗರಣವಾಗಿದೆ. ವಾಲ್ಮೀಕಿ ನಿಗಮದ 94 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆ ಇಡಿ ಅಧಿಕಾರಿಗಳು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಮಾಜಿ ಸಚುವ ಬಿ.ನಾಗೇಂದ್ರ ಅವರ ಮನೆ ಕಚೇರಿ ಮೇಲೆ ದಾಳಿ ನಡೆಸಿದ್ದು, ನಾಗೇಂದ್ರ ಅವರನ್ನು ಬಂಧಿಸಿದ್ದಾರೆ.
ಇನ್ನು ನಾಗೇಂದ್ರ ಅವರ ಮೇಲೆ ಆಪ್ತರೊಬ್ಬರಿಂದ 25 ಲಕ್ಷ ಲಂಚ ಪಡೆದ ಆರೋಪವಿದೆ. 94 ಕೋಟಿ ಹಣವನ್ನು ವಾಲ್ಮೀಕಿ ನಿಗಮದ ಖಾತೆಯಿಂದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಚಿವರ ಸೂಚನೆಯ ಮೇರೆಗೆ ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಇಡಿ ಕೂಡ ತನಿಖೆ ನಡೆಸುತ್ತಿದ್ದು, ಇದೀಗ ನಾಗೇಂದ್ರ ಅವರ ಪತ್ನಿಯನ್ನು ವಶಕ್ಕೆ ಪಡೆದಿದೆ.