ಶಾಮನೂರು ಶಿವಶಂಕರಪ್ಪ ನಕಲಿ ಸಹಿ ಬಳಸಿ ವಂಚನೆ ಮಾಡುತ್ತಿದ್ದವರ ಬಂಧನ..!
ಬೆಂಗಳೂರು: ವಂಚನೆ ಮಾಡುವ ಗ್ಯಾಂಗ್ ಗಳು ರಾಜಕೀಯ ವ್ಯಕ್ತಿಗಳ ಹೆಸರನ್ನು, ಸಹಿಯನ್ನು ಧೈರ್ಯವಾಗಿಯೇ ಬಳಸಿಕೊಳ್ಳುತ್ತಾರೆ. ಇಲ್ಲಿಬ್ಬರು ಖದೀಮರು ಭಯವೇ ಇಲ್ಲದೇ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಹಿಯನ್ನು ದುರ್ಬಳಕೆ ಮಾಡಿಕೊಂಡು, ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ನಕಲಿ ಸಹಿ ಬಳಸಿ, ಲೆಟರ್ ಹೆಡ್ ಸೃಷ್ಟಿಸಿದ್ದಾರೆ. ಅದೇ ಲೆಟರ್ ಹೆಡ್ ಮೂಲಕ ಕೆಲಸ ಪಡೆದುಕೊಂಡಿದ್ದ ಸ್ವಾಮಿ ಹಾಗೂ ಅಂಜನ್ ಕುಮಾರ್ ಎಂಬಾತನ ಬಂಧನವಾಗಿದೆ. ಸ್ವಾಮಿ ರಾಮನಗರ ಮೂಲದವರಾಗಿದ್ದು, ಸದ್ಯ ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಸ್ವಾಮಿ ಈ ಹಿಂದೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಕೊಂಡಿದ್ದ. ಕೆಲವು ದಿನಗಳ ನಂತರ ಕೆಲಸ ಬಿಟ್ಟು ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡಿದ್ದ. ಕೆಲ ದಿನಗಳ ಹಿಂದೆ ಶಾಮನೂರು ಶಿವಶಂಕರಪ್ಪ ಅವರ ಹೆಸರು ಬಳಸಿಕೊಂಡು ನಕಲಿ ಸಹಿ ಮಾಡಿರುವ ಲೆಟರ್ ಹೆಡ್ ಅನ್ನು ವಿಧಾನಸಭಾ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದ. ಅದರಲ್ಲಿ ವಿನುತಾ ಹಾಗೂ ಅಂಜನ್ ಎಂಬುವವರಿಗೆ ಶಾಸಕ ಆಪ್ತ ಸಹಾಯಕರ ಹುದ್ದೆ ನೀಡುವಂತೆ ಬರೆದಿತ್ತು. ಲೆಟರ್ ಹೆಡ್ ಬಳಸಿ ತಮ್ಮ ಪತ್ನಿ ವಿನುತಾಗೆ ಶಿವಶಂಕರಪ್ಪ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸು ಮಾಡಲಾಗಿತ್ತು.
ವಿಧಾನಸಭಾ ಸಚಿವಾಲಯ ಸಿಬ್ಬಂದಿ ಈ ನಕಲಿ ಲೆಟರ್ ಹೆಡ್ ನಂಬಿ ವಿನುತಾಗೆ 2023ರಲ್ಲಿ ಕೆಲಸ ಕೂಡ ನೀಡಿದ್ದರು. ಕೆಲಸಕ್ಕೆ ಬಾರದೆಯೇ ಪ್ರತಿ ತಿಂಗಳು ವಿನುತಾ 30 ಸಾವಿರ ಸಂಬಳ ಪಡೆದಿದ್ದರು. ಆನಂತರ ಗರ್ಭಿಣಿಯಾದ ಮೇಲೆ ಕೆಲಸದಿಂದ ಬಿಡುಗಡೆಗೊಳಿಸಲು ವಿನುತಾ ಪತ್ರ ಬರೆದಿದ್ದರುಮ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಸದ್ಯ ವಿನುತಾಗೂ ಪೊಲೀಸರು ನೋಟೀಸ್ ನೀಡಿದ್ದಾರೆ.k