For the best experience, open
https://m.suddione.com
on your mobile browser.
Advertisement

ಭದ್ರಾ ಮೇಲ್ದಂಡೆ ಯೋಜನೆ : 5300 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸೂಕ್ತ ಕ್ರಮ : ಸಂಸದ ಗೋವಿಂದ ಕಾರಜೋಳ

03:22 PM Jun 19, 2024 IST | suddionenews
ಭದ್ರಾ ಮೇಲ್ದಂಡೆ ಯೋಜನೆ   5300 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸೂಕ್ತ ಕ್ರಮ   ಸಂಸದ ಗೋವಿಂದ ಕಾರಜೋಳ
Advertisement

ಚಿತ್ರದುರ್ಗ. ಜೂನ್19: ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡೋಣ ಎಂದು ನೂತನ ಸಂಸದ ಗೋವಿಂದ ಕಾರಜೋಳ ಆಶಯ ವ್ಯಕ್ತಪಡಿಸಿದರು.

Advertisement

ಸಂಸದರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಆಡಳಿತ ಎಂಬ ಎತ್ತಿನ ಬಂಡಿ ಎರಡು ಗಾಲಿಗಳಿದ್ದಂತೆ, ಎರಡೂ ಚಕ್ರಗಳು ಸಮನಾಗಿ ಸಾಗಿದಾಗ ಮಾತ್ರ ಬಂಡಿ ಸುಗಮವಾಗಿ ಸಾಗಲು ಸಾಧ್ಯ.  ಅದೇ ರೀತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಆಡಳಿತ ಸುಗಮ ಹಾಗೂ ಉತ್ತಮವಾಗಿ ನಡೆಸಲು ಸಾಧ್ಯವಾಗುತ್ತದೆ.  ಹೀಗಾಗಿ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಸಮನ್ವಯತೆಯಿಂದ ಕೆಲಸ ಮಾಡೋಣ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡೋಣ.

Advertisement

ಇದಕ್ಕೆ ಎಲ್ಲ ಅಧಿಕಾರಿಗಳ ಸಹಕಾರ ಕೋರುತ್ತೇನೆ ಎಂದು ಆಶಯ ವ್ಯಕ್ತಪಡಿಸಿದ ಸಂಸದರು, ಲೋಕಸಭೆ ಚುನಾವಣೆಯನ್ನು ಎಲ್ಲ ಅಧಿಕಾರಿಗಳು ಒಟ್ಟುಗೂಡಿ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಅಲ್ಲದೆ, ಸರ್ಕಾರಿ ನೌಕರರು ಬಹಳಷ್ಟು ಸಂಖ್ಯೆಯಲ್ಲಿ ನಮಗೆ ಮತ ಚಲಾಯಿಸಿದ್ದು, ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ 3.21 ಲಕ್ಷ ಹೆ. ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗುವ ಗುರಿ ಇದ್ದು, ಈ ಬಾರಿ ಉತ್ತಮವಾಗಿ ಮಳೆಯಾಗಿದೆ.  143 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 214 ಮಿ.ಮೀ. ಮಳೆಯಾಗಿ, ಶೇ. 51 ರಷ್ಟು ಹೆಚ್ಚು ಮಳೆಯಾದಂತಾಗಿದೆ.  ಹೊಳಲ್ಕೆರೆ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಜಿಲ್ಲೆಯಲ್ಲಿ ಮುಸುಕಿನ ಜೋಳ, ಶೇಂಗಾ, ರಾಗಿ ಮುಂತಾದ ಬೆಳೆಗಳನ್ನು ಹೆಚ್ಚು ಬೆಳೆಯುತ್ತಾರೆ.  ಬಿತ್ತನೆ ಬೀಜ ಹಾಗೂ ಗೊಬ್ಬರದ ಯಾವುದೇ ಕೊರತೆ ಇಲ್ಲ.  ಸದ್ಯ 18 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ.  ಡಿಐಪಿ ಗೊಬ್ಬರಕ್ಕೆ ಬೇಡಿಕೆ ಬರುತ್ತಿದ್ದು, 3500 ಟನ್ ಡಿಐಪಿ ಗೊಬ್ಬರ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಸಬ್ಸಿಡಿಯಲ್ಲಿ ಕೃಷಿ ಉಪಕರಣಗಳ ಖರೀದಿಗೆ ಈ ವರ್ಷ ಸುಮಾರು 25 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಜಂಟಿಕೃಷಿ ನಿರ್ದೇಶಕ ಮಂಜುನಾಥ್ ಹೇಳಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಹೆಚ್ಚಿನ ಅನುದಾನ ತರಿಸಬೇಕು,  ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‍ಸಿ, ಎಸ್‍ಟಿ ರೈತರು ಇದ್ದಾರೆ.  ಹೀಗಾಗಿ ಬೇಡಿಕೆ ಪಟ್ಟಿ ತಯಾರಿಸಿ ಸಲ್ಲಿಸಿದಲ್ಲಿ, ಜಿಲ್ಲೆಗೆ ಹೆಚ್ಚಿನ ಅನುದಾನ ಕೊಡಿಸಲು ಯತ್ನಿಸುತ್ತೇನೆ.  ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಕಳಪೆ ಬಿತ್ತನೆ ಬೀಜ ಮಾರಾಟ ಆಗದಂತೆ ಎಚ್ಚರ ವಹಿಸಬೇಕು, ಕೃಷಿ ಉತ್ಪನ್ನಗಳ ಮಾರಾಟ ದರದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ವೈದ್ಯರ ಕೊರತೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಿಸಬೇಕು, ಅಲ್ಲಿಯವರೆಗೂ ಕನಿಷ್ಟ ಪಕ್ಷ ಆಯುಷ್ ವೈದ್ಯರುಗಳನ್ನಾದರು ನಿಯೋಜಿಸಬೇಕು.  ಪ್ರಯೋಗಾಲಯ ತಜ್ಞರು, ಎಕ್ಸ್‍ರೇ ತಜ್ಞರು ಮುಂತಾದವರ ಕೊರತೆಯನ್ನು ನೀಗಿಸಿ, ಆಸ್ಪತ್ರೆಗಳಲ್ಲಿರುವ ಯಂತ್ರೋಪಕರಣಗಳು ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು, ಔಷಧಿಗಳ ಕೊರತೆಯಾಗಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇಶದಲ್ಲಿ ಎಲ್ಲ ಮನೆ ಮನೆಗೂ ಸುರಕ್ಷಿತ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಪ್ರಧಾನಮಂತ್ರಿಗಳು ಕ್ರಾಂತಿಯನ್ನೇ ಮಾಡಿದ್ದಾರೆ.  ಇಂತಹ ಯೋಜನೆ ರೂಪಿಸುವಲ್ಲಿ ತಮ್ಮ ಪಾತ್ರ ಬಹಳಷ್ಟಿದೆ ಎಂದು ಸ್ಮರಿಸಿದ ಸಂಸದರು, ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಹಲಗಲಿ ಎಂಬ ಸುಮಾರು 8 ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಊರಿನಲ್ಲಿ ಕುಡಿಯುವ ನೀರಿನ ಬಹಳಷ್ಟು ಸಮಸ್ಯೆ ಇತ್ತು, ಈ ಊರಿನ ಯುವಕರಿಗೆ ಯಾರೂ ಕೂಡ ಹೆಣ್ಣು ಕೊಟ್ಟು ಮದುವೆ ಮಾಡಲೂ ಮನಸ್ಸು ಮಾಡುತ್ತಿರಲಿಲ್ಲ.

Advertisement
Advertisement

ಅಷ್ಟೊಂದು ಕಠಿಣ ಪರಿಸ್ಥಿತಿ ನಿರ್ಮಾಣವಾಗಿತ್ತು.  ಹೀಗಿರುವಾಗ, ಬಹುಗ್ರಾಮ ಕುಡಿಯುವ ನೀರು ಯೋಜನೆ ಜಾರಿಗೊಳಿಸಿ, ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿ, ಈ ಊರಿನ ಎಲ್ಲ ಮನೆಗಳಿಗೆ ಉತ್ತಮ ಕುಡಿಯುವ ನೀರು ಪೂರೈಸಲು ಸಾದ್ಯವಾಯಿತು, ನಳ ಸಂಪರ್ಕಕ್ಕೆ ಮೀಟರ್ ಅಳವಡಿಸಿದ್ದರಿಂದ ಶೇ. 70 ರಷ್ಟು ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಗಟ್ಟಿದಂತಾಯಿತು.  ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ತಂಡ ಆಗಮಿಸಿ, ವೀಕ್ಷಿಸಿ, ಯೋಜನೆ ಯಶಸ್ವಿಯಾಗಿದ್ದನ್ನು ಕಂಡು ಕೊಂಡಿತು.  ತಂಡದಿಂದ ವರದಿ ಪಡೆದ ಕೇಂದ್ರ ಸರ್ಕಾರ ಬಳಿಕ ಈ ಯೋಜನೆಯಿಂದ ಸ್ಫೂರ್ತಿ ಪಡೆದು, ಜಲಜೀವನ್ ಮಿಷನ್ ನಂತಹ ಬೃಹತ್ ಯೋಜನೆ ಜಾರಿಗೊಳಿಸಲು ಕಾರಣವಾಯಿತು ಎಂದು ಖುಷಿಯಿಂದ ವಿಷಯ ಹಂಚಿಕೊಂಡರು.
ಚಿತ್ರದುರ್ಗ ನಗರಕ್ಕೆ ನಗರಸಭೆಯಿಂದ ಪ್ರಸ್ತುತ ಮೂರ್ನಾಲ್ಕು ದಿನಕ್ಕೆ ಒಮ್ಮೆ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಪೂರೈಸುವಂತಾಗಲು ನೀರು ಪೂರೈಕೆ ಪೈಪ್ ಜಾಲವನ್ನು ನವೀಕರಿಸಬೇಕು ಹಾಗೂ ಈಗಿರುವ ಜಾಲವನ್ನು ಸುಧಾರಿಸುವ ಕಾಮಗಾರಿ ಮಾಡಬೇಕು.

ಶಾಂತಿಸಾಗರದಿಂದ ಜನರಿಗೆ ಪೂರೈಸಲಾಗುತ್ತಿರುವ ನೀರು ಸರಿಯಾಗಿ ಶುದ್ಧೀಕರಣ ಮಾಡದಿರುವುದು ಕಂಡುಬಂದಿದ್ದು, ಸಮರ್ಪಕವಾಗಿ ನೀರು ಶುದ್ಧೀಕರಿಸಿ ಪೂರೈಸಬೇಕು.  ಮುಂದಿನ 30 ವರ್ಷಗಳಲ್ಲಿ ಆಗಬಹುದಾದ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು, ಕುಡಿಯುವ ನೀರಿನ ಯೋಜನೆಗಳನ್ನು ನಿರ್ಮಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕುರಿತು ಮಾತನಾಡಿದ ಸಂಸದರು, ಕೇಂದ್ರ ಸರ್ಕಾರ ಕಳೆದ ಬಜೆಟ್‍ನಲ್ಲಿ ಘೋಷಿಸಿರುವ 5300 ಕೋಟಿ ರೂ. ಅನುದಾನ ಪಡೆಯುವ ಕುರಿತು ಸೂಕ್ತ ಕ್ರಮ ವಹಿಸುವುದಾಗಿ ಹೇಳಿದರು.  ರಸ್ತೆ ಬದಿಗಳಲ್ಲಿ ನೆಡುವ ಗಿಡಗಳ ಪೈಕಿ ಶೇ. 90 ರಷ್ಟು ವಿಫಲವಾಗುತ್ತಿರುವುದು ಕಂಡುಬಂದಿದ್ದು, ಇದರ ಜೊತೆಗೆ ಜಿಲ್ಲೆಯ ಸರ್ಕಾರಿ ಜಾಗ, ಕಚೇರಿ, ಹಾಸ್ಟೆಲ್, ಶಾಲೆ, ಕಾಲೇಜು ಆವರಣದಲ್ಲಿ ಅರಣ್ಯ ಇಲಾಖೆಯವರು ಹೆಚ್ಚಿನ ಗಿಡಗಳನ್ನು ನೆಡಬೇಕು ಎಂದು ಸೂಚನೆ ನೀಡಿದರು.

ಪಿಎಂ ವಿಶ್ವಕರ್ಮ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ನೊಂದಾಯಿಸಲು ಅಧಿಕಾರಿಗಳು ಅಸಂಘಟಿತ ಕಾರ್ಮಿಕ ವಲಯದ ಸಂಘ ಸಂಸ್ಥೆಗಳ ನೆರವು ಪಡೆಯಬೇಕು.  ಗ್ರಾಮೀಣ ಜನರು ಕೆಲಸ ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ನರೇಗಾ ಯೋಜನೆಯಡಿ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಿ, ಕೆಲಸ ಕೊಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್, ಎಸ್‍ಪಿ ಧರ್ಮೇಂದ್ರ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಕಾರ್ತಿಕ್, ಜಿ.ಪಂ. ಯೋಜನಾ ನಿರ್ದೇಶಕ ಡಾ. ರಂಗಸ್ವಾಮಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Tags :
Advertisement