ಭದ್ರಾ ಮೇಲ್ದಂಡೆ, ನೇರ ರೈಲ್ವೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಚಿವ ಡಿ.ಸುಧಾಕರ್ ಸೂಚನೆ
ಚಿತ್ರದುರ್ಗ. ಜುಲೈ.01: ಭದ್ರಾ ಮೇಲ್ದಂಡೆ ಯೋಜನೆ ಹಾಗೂ ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ ನೀಡಿದರು.
ಹಿರಿಯೂರು ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲ್ವೆ ಯೋಜನೆ ಹಾಗೂ ಕೆಐಡಿಬಿ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲ್ವೆ ಯೋಜನೆ, ಕೈಗಾರಿಕಾ ಕಾರಿಡಾರ್ ಯೋಜನೆಗಳನ್ನು ನಿಗಧಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಚುನಾವಣಾ ನೀತಿ ಸಂಹಿತೆಯಿಂದಾಗಿ ಯೋಜನೆ ಕಾಮಗಾರಿಗಳು ಮಂದಗತಿಯಾಗಿದ್ದು, ಇದೀಗ ಯೋಜನೆಗಳ ಪೂರ್ಣಗೊಳಿಸಲು ವೇಗ ನೀಡಲಾಗುವುದು ಎಂದರು.
ಬೋರನಕಣಿವೆ ಜಲಾಶಯದ ವಿವರ ಪರಿಶೀಲಿಸಿ ಹೆಚ್ಚಿನ ನೀರಿನ ಅಲೋಕೇಶನ್ ತಂದು ಅಲ್ಲಿಂದ ಗಾಯಿತ್ರಿ ಜಲಾಶಯಕ್ಕೆ ತರಲು ಕ್ರಮವಹಿಸಲಾಗುವುದು. ಹೊಸಹಳ್ಳಿ ಬ್ಯಾರೇಜ್‍ನ ವಿದ್ಯುತ್ ಸಮಸ್ಯೆಯನ್ನು ಆ ಭಾಗದ ರೈತರೊಂದಿಗೆ ಚರ್ಚಿಸಿ ಶೀಘ್ರ ಬಗೆಹರಿಸಿ ಬಹುದೊಡ್ಡ ಈ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕಿದೆ ಎಂದರು.
ಕೆಐಡಿಬಿ ಅಧಿಕಾರಿ ಲಕ್ಷ್ಮೀಶ್ ಮಾತನಾಡಿ ಮೇಟಿಕುರ್ಕೆ ಕೈಗಾರಿಕಾ ಕಾರಿಡಾರ್ ಯೋಜನೆಯ 1156 ಎಕರೆ ಪ್ರದೇಶದಲ್ಲಿ 920 ಎಕರೆ ಪ್ರದೇಶದ ರೈತರಿಗೆ ಪರಿಹಾರ ನೀಡಲಾಗಿದೆ. ಇನ್ನೂ 336 ಎಕರೆಗೆ ಪರಿಹಾರ ಕೊಡಬೇಕು. ಇಲ್ಲಿಯವರೆಗೆ ರೂ.380 ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ರೂ.312 ಕೋಟಿ ಪರಿಹಾರ ನೀಡಲಾಗಿದೆ. ಮೇಟಿಕುರ್ಕೆ ಕರಿಯೋಬನಹಳ್ಳಿಯಲ್ಲಿ ಲೇಔಟ್ ಅನುಮೋದನೆ ಆಗಿದೆ. ನಾಲ್ಕರಲ್ಲಿ ಮೂರು ಪ್ಯಾಕೇಜ್ ವರ್ಕ್ ಅವಾರ್ಡ್ ಆಗಿದ್ದು ಕೆಲಸ ನಡೆಯುತ್ತಿದೆ. ಒಂದರಲ್ಲಿ ಕೆಲಸ ಶುರುವಾಗಬೇಕಿದೆ. 1156 ಎಕರೆ ಪ್ರದೇಶದಲ್ಲಿ 764 ಎಕರೆ ಕೈಗಾರಿಕಾ ಪ್ರದೇಶವಾಗಿದ್ದು, ಉಳಿದ ಪ್ರದೇಶದಲ್ಲಿ ಉದ್ಯಾನವನ, ಆಸ್ಪತ್ರೆ, ವಸತಿ ಗೃಹಗಳಿಗೆ ಮೀಸಲಿರಿಸಲಾಗಿದೆ ಎಂದರು.
ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆಗೆ 1210 ಎಕರೆ ಬೇಕಾಗಿದ್ದು, ಹಿರಿಯೂರಿನಲ್ಲಿ 55 ಕಿಮೀ ಹಾದು ಹೋಗಲಿದೆ. ತಾಲ್ಲೂಕಿನಲ್ಲಿ 113 ಎಕರೆ ಭೂ ಸ್ವಾಧೀನ ಬಾಕಿಯಿದೆ. ಎರಡು ತಿಂಗಳಲ್ಲಿ 70 ಎಕರೆ ಭೂ ಸ್ವಾಧೀನಪಡಿಸಿಕೊಂಡು ಕೆಲಸ ಪ್ರಾರಂಭ ಮಾಡಲಾಗುವುದು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ವಿವೇಕ್ ಸಭೆಗೆ ಮಾಹಿತಿ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಎಸ್.ಎಚ್.ಲಮಾಣಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ಅನುಮೋದನೆ ಆಗಿರುವ ಕೆರೆಗಳಿಗೆ ನೀರು ಬರಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜವನಗೊಂಡನಹಳ್ಳಿ ಹಾಗೂ ಕರಿಯಾಲ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನಮಗೆ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಕರಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಅವರು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.