ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು : ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ..!
ಚಿಕ್ಕಮಗಳೂರು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ವಿರೋಧಿಸುತ್ತಾ ಇದ್ದಾರೆ. ಇದೀಗ ಈ ಬಗ್ಗೆ ಸಿಟಿ ರವಿ ಮಾತನಾಡಿ, ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರಿಗೆ ತಿರುಗೇಟು ನೀಡಿದ್ದಾರೆ. ಟಿಪ್ಪುವಿನ ಹೆಸರನ್ನು ಅವರ ಮನೆಗೆ ಬೇಕಾದರೆ ಇಟ್ಟುಕೊಳ್ಳಲಿ ಎಂದಿದ್ದಾರೆ.
ನೀವೂ ನಿಮ್ಮ ಊರಿನ ಬೀದಿಗೂ ಟಿಪ್ಪು ಸುಲ್ತಾನನ ಹೆಸರನ್ನು ಇಡುವುದಕ್ಕೆ ಬಿಡುವುದಿಲ್ಲ. ಬೇಕಾದರೆ ನಿಮ್ಮ ಮನೆಗೆ ಇಟ್ಟುಕೊಳ್ಳಿ. ಕಾಂಗ್ರೆಸ್ಸಿಗರಿಗೆ ಅಭಿಮಾನವಿದ್ದರೆ ನಿಮ್ಮ ಕಚೇರಿಗಳಿಗೆ ಹೆಸರಿಟ್ಟುಕೊಳ್ಳಿ. ನಾವ್ಯಾರು ಬೇಡ ಎನ್ನುವುದಿಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಹೆಸರು ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು. ಮಡಿಕೇರಿ ಜನರಿಗೆ ಕೇಳಿ, ಟಿಪ್ಪು ಏನು ಮಾಡಿದ್ದಾನೆ ಅಂತ ಹೇಳುತ್ತಾರೆ ಎಂದಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕದ ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ, ವಿಜಯಪುರ ಸೇರಿದಂತೆ ನಾಲ್ಕು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆಗ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವಂತೆ ಹುಬ್ಬಳ್ಳಿ-ಧಾರವಾಡ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಒತ್ತಾಯಿಸಿದ್ದರು. ಇದೇ ವಿಚಾರವಾಗಿ ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಅವರು ಪ್ರಸಾದ್ ಅಬ್ಬಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.