ಸರ್ಕಾರ ಬೀಳಿಸಲು ಸಾವಿರ ಕೋಟಿ : ಯತ್ನಾಳ್ ಹೇಳಿಕೆ.. ಐಟಿ ತನಿಖೆಗೆ ಡಿಸಿಎಂ ನಿರ್ಧಾರ..!
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿಲುಕಿದ್ದಾರೆ. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಇದರ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸಿಎಂ ಆಗಲಿ ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇದೇ ಹೇಳಿಕೆಗೆ ಇದೀಗ ಡಿಸಿಎಂ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಇದರ ಬಗ್ಗೆ ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಪಕ್ಷ ಹಾಗೂ ಸರ್ಕಾರ ಉರುಳಿಸಲು ಈ ಕೆಲಸ ಮಾಡಲಾಗುತ್ತಿದೆ. ನಮ್ಮ ಕಾನೂನು ಸಲಹೆಗಾರರ ಬಳಿ ಚರ್ಚೆ ನಡೆಸಲಾಗುವುದು. ಈ ಕೃತ್ಯ ಐಟಿಯವರಿಂದ ತನಿಖೆಗೆ ಒಳಗಾಗಬೇಕು. ಯತ್ನಾಳ್ ಹೇಳಿಕೆ ಬಗ್ಗೆ ನಮಗೂ ಮಾಹಿತಿ ಇದೆ ಎಂದಿದ್ದಾರೆ.
ಇನ್ನು ಯತ್ನಾಳ್ ಹೇಳಿಕೆ ಕುರಿತು ಚರ್ಚೆ ನಡೆಸಲು ಕಾನೂನು ತಂಡದ ಸಭೆ ಕರೆದಿದ್ದೇನೆ. 1,200 ಕೋಟಿ ರೆಡಿಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಕಡೆಯಿಂದ ಈ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಇದು ತೆರಿಗೆ ಇಲಾಖೆ ಹಾಗೂ ಇಡಿ ತನಿಖರಯ ವ್ಯಾಪ್ತಿಗೆ ಒಳಪಡಲಿದೆ. ದೂರು ನೀಡುವ ಸಂಬಂಧ ಇಂದು ಚರ್ಚೆ ನಡೆಸಲಿದ್ದೇವೆ ಎಂದಿದ್ದಾರೆ.
ಶಾಸಕ ಯತ್ನಾಳ್, ಕೆಲವರು ಆಪರೇಷನ್ ಗೆ ಹಣವನ್ನು ಇಟ್ಟುಕೊಂಡು, ಸಿಎಂ ಖುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಜೈಲು ಪಾಲಾಗಬಹುದು ಎಂದು ಹೇಳಿದ್ದರು.