ಸಾಯುವ ತನಕ ಈ ಕನಕಪುರ ಬಂಡೆ ಸಿದ್ದರಾಮಯ್ಯ ಅವರ ಜೊತೆಗಿರುತ್ತೆ : ಡಿಕೆ ಶಿವಕುಮಾರ್
ಹಾಸನ: ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಇಂದು ಜನಕಲ್ಯಾಣ ವೇದಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತು ಶುರು ಮಾಡಿದರು. ಸಿದ್ದರಾಮಯ್ಯ ಎಂದಾಕ್ಷಣ ಕೇಕೆ ಹಾಕುವುದನ್ನು ನಿಲ್ಲಿಸಲಿಲ್ಲ ಜನ. ಆಗ ಡಿಕೆ ಶಿವಕುಮಾರ್ ಅವರು ಆಯ್ತು.. ಆಯ್ತು ಎಂದು ಹೇಳಿ ತಮ್ಮ ಭಾಷಣ ಶುರು ಮಾಡಿದರು. ಆರಂಭದಲ್ಲಿಯೇ ತಲೆ ಕೆಡಿಸಿಕೊಳ್ಳಬೇಡಿ ಈ ಬಂಡೆ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತೆ ಅಂತ ಹೇಳಿದ್ದೆ. ಇಂದು ಇರ್ತೀನಿ, ನಾಳೆಯು ಇರ್ತೀನಿ, ಸಾಯುವ ತನಕ ಇರ್ತೀನಿ. ಎಲ್ಲಿ ಕೆಲಸ ಮಾಡ್ತೀನೋ ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಇರುವುದು ನನ್ನ ಗುಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ ಎಂದು ಹೇಳ್ತಾ ಇರ್ತೀನಿ. ಈ ಹಾಸನದ ಜನತೆ ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿ, ಸಂಸತ್ ನಲ್ಲಿ ಮಾತನಾಡುವಂತೆ ಮಾಡಿದ್ದೀರಿ. ನೊಂದ ತಾಯಂದಿರಿಗೆ ನ್ಯಾಯ ಕೊಡುವಂತೆ ಮಾಡಿದ್ದೀರಿ. ಜೆಡಿಎಸ್ ಮತ್ತು ಬಿಜೆಪಿಯ ಸುಳ್ಳು ಮಾಲೆಗಳು ಸಂಡೂರು, ಶಿಗ್ಗಾಂವಿಯಲ್ಲಿ ಉತ್ತರ ಕೊಟ್ಟಿದೆ.
ಚುನಾವಣೆಯ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ.. ತೆನೆ ಹೊಲದಲ್ಲಿದ್ದರೆ ಚೆಂದ.. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚಂದ ಎಂದಿದ್ದೆ. ಈ ಕೈ ಅಧಿಕಾರದಲ್ಲಿರೋ ಕಾರಣ ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬಿ, ಜನರ ಸಂಕಲ್ಪ ಕಲ್ಯಾಣ ಮಾಡಿ, ಈ ರಾಜ್ಯಕ್ಕೆ ಸಂದೇಶವನ್ನು ಕೊಟ್ಟಿದ್ದೇವೆ. ಚನ್ನಪಟ್ಟಣದಲ್ಲಿ, ಮೈಸೂರಲ್ಲಿ, ಮಂಡ್ಯದಲ್ಲಿ ಗೆದ್ದಿದ್ದೇವೆ. ಮುಂದೆ ಹಾಸನದಲ್ಲೂ ಗೆದ್ದೆ ಗೆಲ್ಲುತ್ತೇವೆ ಎಂಬ ನಂಬಿಕೆಯಿಂದ ಇಲ್ಲಿಗೆ ಬಂದಿದ್ದೇವೆ. ನೀವೂ ಆಶೀರ್ವದಿಸಬೇಕು. ಹೆಣ್ಣು ಮಕ್ಕಳ ಗೋಳು ಕಳೆದು ಹಾಸನಾಂಬೆ ತಾಯಿ ಕಳೆಯಬೇಕು ಎಂದು ಬೇಡಿಕೊಳ್ಳುತ್ತೇನೆ. ಇದು ಹಾಸನದ ದೊಡ್ಡ ಇತಿಹಾಸ ಎಂದು ಡಿಕೆ ಶಿವಕುಮಾರ್ ಅಬ್ಬರಿಸಿದ್ದಾರೆ.