ಸ್ಪರ್ಧೆಗೆ ಮಂಡ್ಯ ಮುಖಂಡರ ಒತ್ತಾಯವಿದೆ.. ಶೀಘ್ರವೇ ಎಲ್ಲದಕ್ಕೂ ತೆರೆ ಬೀಳಲಿದೆ : ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯ ರಣಕಣದಲ್ಲಿ ಮಂಡ್ಯ ಕ್ಷೇತ್ರವೇ ಹೆಚ್ಚು ಬಿಸಿಯಾಗಿದೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಗೆ ಮಂಡ್ಯ ಕ್ಷೇತ್ರ ಸಿಗಲಿರುವ ಭರವಸೆ ಇದೆ. ಇದರ ನಡುವೆ ಇತ್ತಿಚೆಗೆ ಸುಮಲತಾ ಹೈಕಮಾಂಡ್ ಮಟ್ಟದಲ್ಲಿಯೇ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಜೆಡಿಎಸ್ ನಾಯಕರು ಅಲರ್ಟ್ ಆಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ನಿಖಿಲ್ ಕುಮಾರಸ್ವಾಮಿ ಅವರನ್ನೇ ನಿಲ್ಲಿಸಿ ಎಂಬ ಒತ್ತಡಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಹಿಂದೆಯೂ ಹೇಳಿದ್ದೆ. ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿಯಲ್ಲ. ನಾನು ಯೂಟರ್ನ್ ಹೊಡೆಯುವ ಗಿರಾಕಿಯೂ ಅಲ್ಲ. 2019ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದೆ, ಸೋತಿದ್ದೆ. ಈಗಲೂ ಸಹಜವಾಗಿ ನನ್ನ ಸ್ಪರ್ಧೆಗೆ ಮಂಡ್ಯ ಮುಖಂಡರ ಒತ್ತಾಯವಿದೆ.
ಮಂಡ್ಯದ ಅಭ್ಯರ್ಥಿ ಬಗ್ಗೆ ಶೀಘ್ರದಲ್ಲಿಯೇ ನಮ್ಮ ಪಕ್ಷದ ವರಿಷ್ಠರು ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ತಾಳ್ಮೆಯಿಂದ ಕಾಯಬೇಕು ಅಷ್ಟೆ. ಮಂಡ್ಯದ ವಿಚಾರದಲ್ಲಿ ನನಗೆ ಸ್ಪಷ್ಟನೆ ಇದೆ. ಮಂಡ್ಯಗೆ ನೀವೂ ಬರಬೇಕು, ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಂಡ್ಯ ಮುಖಂಡರು ಕರೆದಿದ್ದರು. ಕಾರ್ಯಕರ್ತರು ಕರೆದಿದ್ದರು. ಈ ಒತ್ತಡದ ಭಾಗವಾಗಿ ನಾನು ಓಡಾಡಿದ್ದೆ. ನನ್ನ ಗಮನ 28 ಕ್ಷೇತ್ರಗಳ ಕಡೆಯೂ ಇರುತ್ತದೆ. ಮೈತ್ರಿ ಅಭ್ಯರ್ಥಿಗಳ ಪರವಾಗಿ ಓಡಾಡುತ್ತೇನೆ. ಮತ್ತೆ ಮೋದಿಯವರೇ ಪ್ರಧಾನಿಯಾಗಬೇಕೆಂಬುದು ಆಶಯ ಎಂದು ಹೇಳಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ನಿಲ್ಲಲ್ಲ ಎಂಬುದನ್ನು ಹೇಳಿದ್ದಾರೆ.