ಶ್ರೀ ರಂಭಾಪುರಿ ಜಗದ್ಗುರು ಕಾರಿಗೆ ಚಪ್ಪಲಿ ಎಸೆದ ಮಹಿಳೆ : ಯಾಕೆ ಗೊತ್ತಾ..?
ಬಾಗಲಕೋಟೆ: ತಾಲೂಕಿನ ಕಲಾದಗಿ ಗ್ರಾಮಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ತೆರಳಿದ್ದರು. ಈ ವೇಳೆ ಶ್ರೀ ಕಾರಿನ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಈ ಘಟನೆ ನಡೆದ ಬಳಿಕ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರು ಆಗಮಿಸಿ ಸೃಷ್ಟಿಯಾಗಿದ್ದ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ತಾಲೂಕಿನ ಕಲಾದಗಿ ಗ್ರಾಮದಲ್ಲಿ ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠವಾದ ಪಂಚಗೃಹ ಗುರುಲಿಂಗೇಶ್ವರ ಮಠವಿದೆ. ಈ ಮಠದ ಪೀಠಾಧಿಪತಿಯ ಆಯ್ಕೆ ಕೋರ್ಟ್ ನಲ್ಲಿದೆ. ಆದರೆ ಮಠದ ಗಂಗಾಧರ ಸ್ವಾಮೀಜಿ ಅವರು ಮಠಕ್ಕೆ ಸಂಬಂಧಿಸಿದ ಕಟ್ಟಡದ ದುರಸ್ತಿ ಕಾರ್ಯ ಹಾಗೂ ಮಠಕ್ಕೆ ಸೇರಿದ ಹೊಲವನ್ನು ಉಳುಮೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಕೆಲವು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ರಂಭಾಪುರಿ ಶ್ರೀಗಳ ಮೇಲೂ ಪ್ರಭಾವ ಬೀರಿದೆ.
ಜಗದ್ಗುರುಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮದಲ್ಲಿ ನಡೆಯಲಿರುವ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ರಂಭಾಪುರಿ ಜಗದ್ಗುರುಗಳು ತೆರಳುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಪ್ರತಿಭಟನೆ ನಡೆಸುವ ಪ್ರಯತ್ನ ನಡೆಯಿತು. ಈ ವೇಳೆ ಮಹಿಳೆಯೋರ್ವಳು ರಂಭಾಪುರಿ ಜಗದ್ಗುರುಗಳಿದ್ದ ಕಾರಿನತ್ತ ಚಪ್ಪಲಿ ತೂರಿದ್ದಾಳೆ. ಪರಿಣಾಮ ಸ್ಥಳದಲ್ಲಿ ತಳ್ಳಾಟ, ನೂಕಾಟ ಸಂಭವಿಸಿದೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.