For the best experience, open
https://m.suddione.com
on your mobile browser.
Advertisement

ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ : ಟ್ರೆಂಡಿಂಗ್ ಆಗ್ತಿದೆ 'ವಿಷ್ಣುಪ್ರಿಯ' ಹಾಡು

09:29 AM Feb 09, 2024 IST | suddionenews
ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ   ಟ್ರೆಂಡಿಂಗ್ ಆಗ್ತಿದೆ  ವಿಷ್ಣುಪ್ರಿಯ  ಹಾಡು
Advertisement

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ವಿಷ್ಣುಪ್ರಿಯ. ಕಣ್ಸನ್ನೆ ಹುಡುಗಿಯನ್ನ ನೋಡುವುದಕ್ಕೆ ಕರ್ನಾಟಕದ ಮಂದಿಯೂ ಕಾಯುತ್ತಿದ್ದಾರೆ. ಪಡ್ಡೆಹುಲಿ ಆದ ಮೇಲೆ ಶ್ರೇಯಸ್ ಮತ್ತೊಂದು ಅವತಾರ ನೋಡಲು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇನ್ನೇನು ಬಿಡಿಗಡೆಯಾಗಿ ಪ್ರೇಕ್ಷಕರ ಆಸೆಗೆ ಮತ್ತಷ್ಟು ಖುಷಿ ನೀಡಲಿರುವ ವಿಷ್ಣುಪ್ರಿಯ ಸದ್ಯ ಹಾಡೊಂದರಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ. ಅದರಲ್ಲೂ ಆ ಹಾಡು ಟ್ರೆಂಡಿಂಗ್ ನಲ್ಲಿ ಕೂಡ ಇದೆ.

Advertisement

ಚೆಂದದ ಹಾಡೊಂದು ವಾರಗಳ ಹಿಂದೆ ಬಿಡುಗಡೆಗೊಂಡಿತ್ತು. ಇದೀಗ ದಿನದಿಂದ ದಿನಕ್ಕೆ ಆ ಹಾಡು ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಕೇಳಿದಾಕ್ಷಣವೇ ಪ್ರೇಮದೂರಿಗೆ ಕೈ ಹಿಡಿದು ಕರೆದೊಯ್ಯುವ ಛಾತಿ ಹೊಂದಿರುವ ಆ ಪ್ರೇಮಗೀತೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ, ಮೆಚ್ಚುಗೆ ಗಳಿಸುತ್ತಾ ಮುಂದುವರೆಯುತ್ತಿದೆ.

Advertisement

ಚಿಗುರು ಚಿಗುರು ಸಮಯ ಹಿತವಾದ ಒಂದು ಮೌನ, ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ... ಎಂಬ ಈ ಹಾಡು ಸಂಗೀತ, ಸಾಹಿತ್ಯ ಹಾಗೂ ದೃಷ್ಯ ಸೇರಿದಂತೆ ಎಲ್ಲ ಕೋನಗಳಲ್ಲಿಯೂ ಸಮ್ಮೋಹಕವಾಗಿದೆ. ಇದಕ್ಕೆ ಸಾಹಿತ್ಯ ಒದಗಿಸಿರುವವರು ಡಾ. ವಿ ನಾಗೇಂದ್ರ ಪ್ರಸಾದ್. ಬಹುಶಃ ಈ ಮೂಲಕ ವರ್ಷಾರಂಭದಲ್ಲಿಯೇ ನವಿರು ಭಾವವೊಂದನ್ನು ನಾಗೇಂದ್ರ ಪ್ರಸಾದ್ ಕೇಳುಗರ ಬೊಗಸೆ ತುಂಬಿಸಿದ್ದಾರೆ. ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಈ ಹಾಡು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕನ್ನಡದಲ್ಲಿಯೂ ಕಮಾಲ್ ಮಾಡಿದ್ದಾರೆ.

ಮತ್ತೆ ಮತ್ತೆ ಕೇಳಿಸಿಕೊಳ್ಳುವ ಗುಣ ಹೊಂದಿರುವ ಈ ಪ್ರೇಮ ಗೀತೆಯ ಪ್ರಭೆಯಲ್ಲಿ ವಿಷ್ಣುಪ್ರಿಯನ ಕ್ರೇಜ್ ಮತ್ತಷ್ಟು ಮಿರುಗುತ್ತಿದೆ. ಈ ವರ್ಷದ ಮೆಲೋಡಿಯಸ್ ಹಾಡೆಂದು ಗುರುತಿಸಿಕೊಳ್ಳುವ ಎಲ್ಲ ಗುಣಗಳೂ ಈ ಚಿಗುರು ಚಿಗುರು ಹಾಡಿಗಿದೆ. ಅಂದಹಾಗೆ, ಇದು ವಿ.ಕೆ ಪ್ರಕಾಶ್ ನಿರ್ದೇಶನದ ಚಿತ್ರ. ತೊಂಬತ್ತರ ದಶಕದಲ್ಲಿ ಘಟಿಸುವ ಈ ಕಥನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸಿದ್ದರೆ, ಒರು ಅಡಾರ್ ಲವ್ ಖ್ಯಾತಿಯ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಈ ಪ್ರೇಮಕಥೆ ಅದೆಷ್ಟು ತಾಜಾತನದಿಂದ ನಳನಳಿಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯೊಂದು ಈ ಹಾಡಿನ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ.

ಗಂಡುಗಲಿ ಕೆ.ಮಂಜು ನಿರ್ಮಾಣದ ವಿಷ್ಣುಪ್ರಿಯ ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರೇಮಕಥೆ ಮಾತ್ರವಲ್ಲ; ತೊಂಬತ್ತರ ದಶಕದಲ್ಲಿ ನಡೆದಿದ್ದ ನೈಜ ಕಥನವೂ ಹೌದು.

Tags :
Advertisement