ಮಾಜಿ ಸಚಿವ ಗೋಪಾಲಯ್ಯಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್..!
ಬೆಂಗಳೂರು: ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಬೆದರಿಕೆ ಹಾಕಿದ್ದ ಮಾಜಿ ಕಾರ್ಪೋರೇಟರ್ ಪದ್ಮರಾಜ್ ರನ್ನು ಬಂಧಿಸಲಾಗಿದೆ. ನನಗೆ ಹಣ ಬೇಕು. ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇನೆ. ತಾಕತ್ತಿದ್ದರೆ ಬಾ ಮನೆ ಹತ್ತಿರ ಎಂದು ಆವಾಜ್ ಹಾಕಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪದ್ಮರಾಜ್ ಬಸವೇಶ್ವರನಗರ ಮಾಜಿ ಕಾರ್ಪೋರೇಟರ್ ಆಗಿದ್ದರು. ರಾತ್ರಿ 11.01ಕ್ಕೆ ಕರೆ ಮಾಡಿದ್ದ ಪದ್ಮರಾಜ್, ನನಗೆ ಹಣ ಬೇಕು, ಇಲ್ಲವಾದರೆ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದರಂತೆ. ಈ ಕರೆ ಬಂದ ಕೂಡಲೇ ಗೋಪಾಲಯ್ಯ ಅವರು ಸ್ಪೀಕರ್ ಹಾಗೂ ಗೃಹಸಚಿವರಿಗೆ ಫ್ಯಾಕ್ಸ್ ಮೂಲಕ ದೂರು ನೀಡಿದ್ದಾರೆ. ತಡರಾತ್ರಿಯೇ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.
ಈ ಸಂಬಂಧ ಸ್ಪಷ್ಟನೆ ನೀಡಿರುವ ಮಾಜಿ ಸಚಿವ ಗೋಪಾಲಯ್ಯನವರು, ನನ್ನ ಹಾಗೂ ಪದ್ಮರಾಜ್ ನಡುವೆ ಯಾವುದೇ ರೀತಿಯ ಹಣಕಾಸು ವ್ಯವಹಾರವಿಲ್ಲ. ಈ ಹಿಂದೆಯೂ ಪದ್ಮರಾಜ್ ಇದೇ ರೀತಿ ಮಾಡಿದ್ದಾರೆ. ಈ ಬಾರಿ ಸುಮ್ಮನೆ ಆಗಲ್ಲ. ಅವನನ್ನು ಗಡಿಪಾರು ಮಾಡಬೇಕೆಂದು ಸದಸನದಲ್ಲೂ ಪ್ರಸ್ತಾಪ ಮಾಡಿದ್ದಾರೆ. ಆತನನ್ನು ಆರು ತಿಂಗಳು ಗಡಿಪಾರು ಮಾಡುವಂತೆ ಸೂಚಿಸಿದ್ದಾರೆ.
ಗೋಪಾಲಯ್ಯ ಅವರು ಸಚಿವರಾಗಿದ್ದಂತ ಸಂದರ್ಭದಲ್ಲಿ ಪದ್ಮರಾಜ್ ಅವರ ಮಗಳಿಗೆ ಬಿಜಿಎಸ್ ನಲ್ಲಿ ಸೀಟು ಕೊಡಿಸಿದ್ದರಂತೆ. ಅಷ್ಟೇ ಅಲ್ಲ ರಾಜಾಜಿನಗರದ ಇಎಸ್ಐನಲ್ಲೂ ವೈದ್ಯೆ ಕೆಲಸವನ್ನು ಕೊಡಿಸಿದ್ದರಂತೆ. ಆದರೆ ಸಮಸ್ಯೆ ಏನಾಗಿದೆ ಎಂಬುದರ ಮಾಹಿತಿ ಇನ್ನು ಸಿಕ್ಕಿಲ್ಲ. ಇದರ ನಡುವೆ ಪದ್ಮರಾಜ್, ಹಣ ಕೊಡಬೇಕೆಂದು ಕೊಲೆ ಬೆದರಿಕೆ ಹಾಕಿದ್ದಾರೆ. ಪೊಲೀಸರು ಅರೆಸ್ಟ್ ಮಾಡಿದ್ದು, ವಿಚಾರಣೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.