5,8,9,11ನೇ ತರಗತಿಗಳ ಬೋರ್ಡ್ ಪರೀಕ್ಷೆ ನಡೆಸಲು ಸರ್ಕಾರಕ್ಕೆ ಅನುಮತಿ ನೀಡಿದ ಹೈಕೋರ್ಟ್..!
ಬೆಂಗಳೂರು: ಪೋಷಕರು, ವಿದ್ಯಾರ್ಥಿಗಳ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. 5,8,9,11 ನೇ ತರಗತಿಯ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಒಪ್ಪಿಗೆ ನೀಡಿದೆ. ಈ ಮೊದಲು ಪರೀಕ್ಷೆ ನಡೆಸಲು ತಡೆಯಾಜ್ಞೆ ನೀಡಿತ್ತು. ಇದೀಗ ಮಹತ್ವದ ಆದೇಶ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.
ಬೋರ್ಡ್ ಪರೀಕ್ಷೆ ನಡೆಸುವ ವಿಚಾರಕ್ಕೆ ಈ ಹಿಂದೆ ಹೈಕೋರ್ಟ್ ಸುತ್ತೋಲೆಯನ್ನು ರದ್ದು ಪಡಿಸಿತ್ತು. ರಾಜ್ಯ ಸರ್ಕಾರದ ಸುತ್ತೋಲೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಸಂಘಟನೆ ಮೇಪ್ಮನವಿ ಸಲ್ಲಿಸಿತ್ತು. ಇದೀಗ ಈ ಸಂಬಂಧ ನ್ಯಾ.ಕೆ ಸೋಮಶೇಖರ್ ಹಾಗೂ ರಾಜೇಶ್ ರೈ ಕೆ ಅವರ ನೇತೃತ್ವದ ಪೀಠ ಪರೀಕ್ಷೆಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ರುಪ್ಸಾ ಕಾನೂನು ಹೋರಾಟಕ್ಕೆ ಹಿನ್ನಡೆಯಾಗಿದೆ.
ಹೈಕೋರ್ಟ್ ನಿಂದ ತಡೆಯಾಜ್ಞೆ ಬಂದ ಹಿನ್ನೆಲೆ 5,8,9,11ನೇ ತರಗತಿಯ ಮಕ್ಕಳಿಗೆ ನಡೆಸುವ ಬೋರ್ಡ್ ಪರೀಕ್ಷೆಯ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ರಾಜ್ಯ ಸರ್ಕಾರದ ಪಠ್ಯ ಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರ ಬೋರ್ಡ್ ಪರೀಕ್ಷೆ ನಡೆಸಲಿದೆ. ಈಗಾಗಲೇ ಪರೀಕ್ಷೆಗಳು ಶುರುವಾಗಿರುವ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದಾನೇ ಇದರ ಅನ್ವಯವಾಗಬಹುದು. ಆದೇಶ ಬಂದಿದ್ದರು ಈ ವರ್ಷ ಇಲ್ಲ ಎಂಬ ನೆಮ್ಮದಿ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಒಂದು ಆದೇಶ ಹೊರಡಿಸುವುದಕ್ಕೆ ಕಾಯುತ್ತಿದ್ದಾರೆ.