ಸಿದ್ದರಾಮಯ್ಯಗೆ ಅಭಯ ನೀಡಿದ ಹೈಕಮಾಂಡ್.. ಡಿಕೆ ಶಿವಕುಮಾರ್ ಏನಂದ್ರು..?
ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದ ಇಂದು ಹೈಕೋರ್ಟ್ ನಿಂದ ಮಹತ್ವದ ತೀರ್ಪು ಬಂದಿದೆ. ಹೈಕೋರ್ಟ್ ಕೂಡ ರಾಜ್ಯಪಾಲರ ಆದೇಶವನ್ನೆ ಎತ್ತಿ ಹಿಡಿದಿದೆ. ಈ ಬೆನ್ನಲ್ಲೇ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿವೆ. ಅದಕ್ಕಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಇದರ ನಡುವೆ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಡಿ. ಕಾನೂನು ಸಮರ ಮುಂದುವರೆಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದೇ ವುಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿ, ನಮ್ಮ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡಿದೆ. ಮೂಡಾ ಪ್ರಕರಣದಲ್ಲಿ ಅವರು ಯಾವುದೇ ತಪ್ಪು ಮಾಡದೆ ಇದ್ದರು, ಅವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯಲು ಬಿಜೆಪಿ ಷಡ್ಯಂತ್ರ ಮಾಡಿದೆ. ನಾವೂ ಇದನ್ನು ಕಾನೂನು ಪ್ರಕಾರವೇ ಎದುರಿಸುತ್ತೇವೆ. ಹೈಕೋರ್ಟ್ ತೀರ್ಪಿನಲ್ಲಿ ಏನಿದೆ ಎಂಬುದನ್ನು ನೋಡಿ ಮಾತನಾಡುವೆ. ತನಿಖೆಗಷ್ಟೇ ಹೈಕೋರ್ಟ್ ಒಪ್ಪಿದೆ. ಸಿದ್ದರಾಮಯ್ಯ ಅವರು ತಪ್ಪು ಮಾಡಿದೆ ಎಂದು ಹೈಕೋರ್ಟ್ ಹೇಳಿಲ್ಲ. ತನಿಖೆ ನಡೆದು, ನಮ್ಮ ಮುಖ್ಯಮಂತ್ರಿಗಳಿಗೆ ಕ್ಲೀನ್ ಚಿಟ್ ಸಿಗಲಿದೆ. ಜನರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಯೋಜನೆಗಳನ್ನು ಬಿಜೆಪಿಯವರಿಗೆ ಸಹಿಸಲು ಆಗದೆ, ಷಡ್ಯಂತ್ರ ಮಾಡಿದ್ದಾರೆ ಎಂದಿದ್ದಾರೆ.