ಮೂರು ಕ್ಷೇತ್ರಗಳ ಸೋಲು ವಿಜಯೇಂದ್ರರ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕುತ್ತು ತರುತ್ತಾ..?
ರಾಜ್ಯದಲ್ಲಿ ಹೈವೋಲ್ಟೇಜ್ ಸೃಷ್ಟಿಸಿದ್ದಂತ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಬಂದಿದೆ. ಮೂರರಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಶಿಗ್ಗಾಂವಿ ಹಾಗೂ ಸಂಡೂರು ಎರಡು ಕೂಡ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂಬ ನಿರೀಕ್ಷೆ ಇತ್ತು. ಜೊತೆಗೆ ಚನ್ನಪಟ್ಟಣದಲ್ಲಿ ಆದಂತ ಬೆಳವಣಿಗೆಯಿಂದ ನಿಖಿಲ್ ಮೂರನೇ ಬಾರಿಯಾದರೂ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಯೋಗೀಶ್ವರ್ ಪ್ರೆಸ್ ಮೀಟ್ ಮಾಡಿ ಅದಕ್ಕೆ ಪುಷ್ಠಿ ಕೂಡ ನೀಡಿದ್ದರು. ಆದರೆ ಫಲಿತಾಂಶ ಬಂದಿದ್ದೆ ಬೇರೆ ರೀತಿ. ಈ ಸೋಲು ರಾಜ್ಯಾಧ್ಯಕ್ಷರ ಹುದ್ದೆಗೆ ಕುತ್ತು ತರುತ್ತಾ ಎಂವ ಪ್ರಶ್ನೆಗಳು ಎದುರಾಗಿವೆ.
ಶಾಸಕ ಬಸನಗೌಡ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿಗೆ ಮೊದಲೇ ಯಡಿಯೂರಪ್ಪ ಪುತ್ರ ರಾಜ್ಯಾಧ್ಯಕ್ಷ ಆಗಿರುವುದು ಕೊಂಚವೂ ಇಷ್ಟವಿಲ್ಲ. ಪ್ರತಿ ಸಲ ವಿಜಯೇಂದ್ರ ಅವರ ವಿರುದ್ಧವಾಗಿಯೇ ಮಾತನಾಡುತ್ತಾರೆ. ಹಾಗೇ ವಿಜಯೇಂದ್ರ ನೇತೃತ್ವದ ಯಾವ ಪ್ರತಿಭಟನೆ, ಪಾದಯಾತ್ರೆಯಲ್ಲೂ ಯತ್ನಾಳ್ ಭಾಗಿಯಾಗಿಲ್ಲ. ಈಗ ಈ ಮೂರು ಕ್ಷೇತ್ರದ ಸೋಲು ಯತ್ನಾಳ್ ಅವರಿಗೆ ಆರೋಪ ಮಾಡಲು ಮತ್ತಷ್ಟು ಬಲ ನೀಡಿದೆ.
ಮೂರು ಕ್ಷೇತ್ರಗಳ ಉಪಚುನಾವಣೆಯ ಸೋಲನ್ನು ಮುಂದಿಟ್ಟುಕೊಂಡು ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯೋಜನೆ ರೂಪಿಸಲಾಗಿದೆ ಎಂದು ಬಲ್ಲ ಮೂಲಗಳ ಮಾಹಿತಿಯಾಗಿದೆ. ಹಲವು ಬಾರಿ ರಮೇಶ್ ಜಾರಕಿಹೊಳಿ ಅವರು ಕೂಡ ಯಾವತ್ತು ನಾವೂ ವಿಜಯೇಂದ್ರ ಅವರನ್ನು ನಮ್ಮ ನಾಯಕ ಎಂದು ಒಪ್ಪಿಲ್ಲ ಎಂದಿದ್ದಾರೆ. ಈಗ ಮೂರು ಕ್ಷೇತ್ರದ ಸೋಲನ್ನ ಅವರ ತಲೆಗೆ ಕಟ್ಟಿ, ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪ್ಲ್ಯಾನ್ ರೂಪಿಸಲಾಗಿದೆ. ಈ ಬೆಳವಣಿಗೆಯಿಂದ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.