ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಕೋರ್ಟ್ ಒಪ್ಪಿಗೆ : ಸಚಿವರಿಗೆ ಆ ಪದವೇ ಮುಳುವಾಯ್ತಾ..?
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಕೋರ್ಟ್ ಅನುಮತಿ ನೀಡಿದೆ. ಕೇಸ್ ದಾಖಲಿಸಿ, ವಿಚಾರಣೆ ನಡೆಸಲು ಕೋರ್ಟ್ ಜನಪ್ರತಿನಿಧಿಗಳ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ಸಚಿವ ಸತೀವ್ ಜಾರಕಿಹೊಳಿ ಈ ಹಿಂದೆ ಹಿಂದು ಪದದ ಬಗ್ಗೆ ಬೇರೆ ರೀತಿಯಾದ ವ್ಯಾಖ್ಯಾನ ನೀಡಿದ್ದರ ಪರಿಣಾಮವೇ ಕೇಸ್ ದಾಖಲಾಗುವಂತೆ ಆಗಿದೆ.
2022ರ ನವಂಬರ್ ನಲ್ಲಿ ಬೆಳಗಾವಿಯಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಹಿಂದು ಪದಕ್ಕೆ ಅಶ್ಲೀಲ ಎಂಬ ಅರ್ಥವಿದೆ ಎಂದಿದ್ದರು. ಇದರ ಮೂಲ ಭಾರತದ್ದಲ್ಲ. ಪರ್ಶಿಯನ್ ಭಾಷೆಯಿಂದ ಬಂದದ್ದು ಹಿಂದು ಎಂಬುದು. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ..? ಅದನ್ನು ನೀವೂ ಹೇಗೆ ಒಪ್ಪಿಕೊಳ್ಳುತ್ತೀರಿ..? ಎಂದು ಪ್ರಶ್ನೆ ಮಾಡಿದ್ದರು. ಈ ವಿಚಾರವಾಗಿ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದರು. ಸತೀಶ್ ಜಾರಕಿಹೊಳಿ ವಿರುದ್ಧ ಕೆಂಡಾಮಂಡಲರಾಗಿದ್ದರು. ಇದೀಗ ಅದೇ ಕೇಸ್ ಮತ್ತೆ ಆಕ್ಟೀವ್ ಆಗಿದೆ.
ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರು, ಹಿಂದೂ ಕಾರ್ಯಕರ್ತರು ಹಾಗೂ ವಕೀಲ ದಿಲೀಪ್ ಕುಮಾರ್ ಅವರು ಖಾಸಗಿ ದೂರು ದಾಖಲಿಸಿದ್ದರು. ಈ ಹೇಳಿಕೆ ನಂತರ ಸತೀಶ್ ಜಾರಕಿಹೊಳಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಲೋಕೋಪಯೋಗಿ ಸಚಿವ ಆಗಿದ್ದಾರೆ. ಆದ್ದರಿಂದ ವಕೀಲ ದಿಲೀಪ್ ಕುಮಾರ್ ಎಂಬುವರು ನೀಡಿದ್ದ ದೂರಿನ ಪ್ರಕರಣದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ ನ್ಯಾಯಾಲಯ, ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಆದೇಶಿಸಿದೆ.