ದೇಶಕ್ಕಾಗಿ ವಕೀಲರುಗಳ ಕೊಡುಗೆ ಅಪಾರ : ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.05 : ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದವರಲ್ಲಿ ಅನೇಕ ವಕೀಲರುಗಳಿದ್ದರು. ಹಾಗಾಗಿ ದೇಶಕ್ಕಾಗಿ ವಕೀಲರುಗಳ ಕೊಡುಗೆ ಅಪಾರ ಎಂದು ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಎಲ್.ನಾರಾಯಣಸ್ವಾಮಿ ಹೇಳಿದರು.
ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ನಡೆದ ವಕೀಲರ ದಿನಾಚರಣೆ ಹಾಗೂ ವಕೀಲ ವೃತ್ತಿಯಲ್ಲಿ 25 ಮತ್ತು 50 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಹಿರಿಯ ವಕೀಲರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ನ್ಯಾಯಾಧೀಶರುಗಳಿಗೆ ತ್ಯಾಗ ಮನೋಭಾವವಿರಬೇಕು. ವಕೀಲರು, ನ್ಯಾಯಾಧೀಶರುಗಳು ಎಲ್ಲಿಯೂ ವೃತ್ತಿಗೆ ಅಗೌರವ ತೋರಬಾರದು.
ನ್ಯಾಯಾಧೀಶರುಗಳಿಗೆ ಕಾನೂನು ವೃತ್ತಿ ತವರು ಮನೆಯಿದ್ದಂತೆ. ವಕೀಲರುಗಳು ಆಧಾರ ಸ್ಥಂಭಗಳಿದ್ದಂತೆ. ಒಳ್ಳೆ ಕೇಸು ಹಾಗೂ ವೃತ್ತಿಯಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಂಡು ತಮ್ಮ ಬಳಿ ಬರುವ ಕ್ಷಕಿದಾರುಗಳಿಗೆ ನ್ಯಾಯ ಒದಗಿಸುವಂತೆ ತಿಳಿಸಿದರು.
ವೃತ್ತಿಯಲ್ಲಿ ಕೆಲವೊಮ್ಮೆ ಏರುಪೇರುಗಳಾಗುವುದುಂಟು. ಎಂತಹ ಪರಿಸ್ಥಿತಿ ಎದುರಾದರೂ ವಕೀಲರುಗಳು ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಇಳಿಯುವುದು ಸರಿಯಾದ ಮಾರ್ಗವಲ್ಲ. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
ಅದನ್ನು ಬಿಟ್ಟು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ನಿಮ್ಮನ್ನು ನಂಬಿ ಬರುವ ಬಡ ಕಕ್ಷಿದಾರರು ಎಲ್ಲಿಗ ಹೋಗಬೇಕು ಎನ್ನುವುದನ್ನು ಮನದಲ್ಲಿಟ್ಟುಕೊಂಡು ವಕೀಲ ವೃತ್ತಿಯ ಪಾವಿತ್ರತೆಯನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ.ಗೀತಾ ಮಾತನಾಡಿ ಅನೇಕ ವಕೀಲರುಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ವಕೀಲರು ಅತ್ಯುತ್ತಮ ವಾಗ್ಮಿ, ತೀಕ್ಷ್ಮಮತಿಗಳಾಗಿರಬೇಕು. ನ್ಯಾಯಾಧೀಶರು, ವಕೀಲರು ಒಂದು ರಥದ ಎರಡು ಚಕ್ರಗಳಿದ್ದಂತೆ. ಎರಡು ಚಕ್ರಗಳು ಒಟ್ಟಿಗೆ ಚಲಿಸಬೇಕು. ಇಲ್ಲದಿದ್ದರೆ ಏರಿಳಿತವಾಗುತ್ತದೆ. ಹಾಗಾಗಿ ಇಬ್ಬರ ನಡುವೆ ಉತ್ತಮ ಸೌಹಾರ್ಧತೆಯಿದ್ದಾಗ ಮಾತ್ರ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.
ನ್ಯಾಯ ವಿತರಣೆ ಮುಖ್ಯ ಉದ್ದೇಶ. ಒಂದು ತೀರ್ಪಿನಿಂದ ನ್ಯಾಯಾಧೀಶರಿಗಷ್ಟೆ ಕೀರ್ತಿ ಸಿಗುವುದಿಲ್ಲ. ಎಲ್ಲಾ ವಕೀಲರಿಗೂ ಸಲ್ಲುತ್ತದೆ. ನ್ಯಾಯಾಧೀಶರಿಗೆ ವಕೀಲರುಗಳು ಸಹಕಾರ ಕೊಡಿ. ಇದೆ ತಿಂಗಳ 9 ರಂದು ಮೆಗಾ ಲೋಕ ಅದಾಲತ್ ಇದೆ. ಇದು ಈ ವರ್ಷದ ಕೊನೆಯ ಅದಾಲತ್ ಸಮಸ್ಯೆಯಿದ್ದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದು. ಕಕ್ಷಿದಾರರು ಲೋಕ ಅದಾಲತ್‍ನ ಸದುಪಯೋಗ ಪಡೆದುಕೊಳ್ಳಿ ಎಂದು ವಿನಂತಿಸಿದರು.
ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು ಜಿ.ಆರ್.ಜೆ. ಮಾತನಾಡುತ್ತ ಕಾನೂನು ಪದವಿ, ಜ್ಞಾನದಿಂದ ವಕೀಲರಾಗಬಹುದು. ಅಡ್ವೋಕೇಟ್ ಆಗಲು ಅಡ್ವೊಕೇಸಿ ಬೇಕು. ವಕೀಲರು ತಮ್ಮ ವೃತ್ತಿಯಲ್ಲಿ ಪರಿಪೂರ್ಣತೆಯನ್ನು ಕಂಡುಕೊಳ್ಳಬೇಕಾದರೆ ದಿನನಿತ್ಯವೂ ಕಾನೂನುಗಳನ್ನು ಓದಬೇಕು. ಅಪಡೇಟ್ ಇಲ್ಲದಿದ್ದರೆ ಔಟ್‍ಡೇಟೆಡ್ ಆಗಬೇಕಾಗುತ್ತದೆ. ಯಾವುದು ಸರಿ ಎನ್ನುವುದನ್ನು ನ್ಯಾಯಾಧೀಶರುಗಳಿಗೆ ಮನವರಿಕೆ ಮಾಡುವ ಕೌಶಲ್ಯ, ಚಾಕಚಕ್ಯತೆ ಅಡ್ವೊಕೇಟ್‍ಗಳಿಗೆ ಇರಬೇಕು ಎಂದು ಹೇಳಿದರು.
ಹೈಕೋಟ್, ಸುಪ್ರೀಂಕೋರ್ಟ್‍ಗಳಲ್ಲಿ ವಕೀಲರು ನ್ಯಾಯಾಧೀಶರ ಎದುರು ವಾದ-ವಿವಾದ ಮಂಡಿಸಬೇಕಾದರೆ ಇಂಗ್ಲಿಷ್ ಭಾಷೆಯ ಜ್ಞಾನವಿರಬೇಕು. ಕಾನೂನು ಜ್ಞಾನ, ಅಡ್ವೊಕೇಸಿ ಕೌಶಲ್ಯ ವಕೀಲರಲ್ಲಿರಬೇಕು. ಸಮಾಜದಲ್ಲಿ ಅನ್ಯಾಯಕ್ಕೊಳಗಾದವರು ತಮ್ಮ ಹಕ್ಕನ್ನು ಪಡೆಯಬೇಕಾದರೆ ವಕೀಲರುಗಳು ಬೇಕು ಎಂದು ವಕೀಲ ವೃತ್ತಿಯ ಮಹತ್ವ ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ, ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ.ಕೋಮಲ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಪರಾಜು, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಸಹ ಕಾರ್ಯದರ್ಶಿ ಗಿರೀಶ್ ಬಿ.ಮಲ್ಲಾಪುರ, ಖಜಾಂಚಿ ಬಿ.ಇ.ಪ್ರದೀಪ್ ವೇದಿಕೆಯಲ್ಲಿದ್ದರು.
ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ನ್ಯಾಯಮೂರ್ತಿಗಳು, ವಕೀಲರು ವಕೀಲರ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ವಕೀಲ ವೃತ್ತಿಯಲ್ಲಿ ಐವತ್ತು ವರ್ಷಗಳ ಸೇವೆ ಸಲ್ಲಿಸಿ 38 ವರ್ಷಗಳಿಂದ ನೋಟರಿಯಾಗಿರುವ ಎಂ.ಚಲ್ಮೇಶ್, ದೊಡ್ಡರಂಗೇಗೌಡ ಹಾಗೂ ಮುದ್ದಣ್ಣ ಮತ್ತು 25 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿರುವ ಹೆಚ್.ಶಿವಕುಮಾರ್, ಸಿ.ಜೆ.ಲಕ್ಷ್ಮಿನಾರಾಯಣ, ಕೆ.ಇ.ಮಲ್ಲಿಕಾರ್ಜುನ್, ಶ್ರೀಮತಿ ಹೇಮ, ಎಸ್.ವಿಜಯ, ಸೇರಿದಂತೆ ಇಪ್ಪತ್ತು ವಕೀಲರುಗಳನ್ನು ಗೌರವಿಸಲಾಯಿತು.