ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ತಂದುಕೊಟ್ಟ ಕ್ಯಾಚ್ : ಭಾರತದ ಪಾಲಿಗೆ ಆಪದ್ಭಾಂದವನಾದ ಸೂರ್ಯ ಕುಮಾರ್ : ವಿಡಿಯೋ ನೋಡಿ...!
ಸುದ್ದಿಒನ್ : ಟೀಂ ಇಂಡಿಯಾ ಮತ್ತೊಂದು ಟಿ20 ವಿಶ್ವಕಪ್ ಗೆಲ್ಲಲಿ ಎಂಬ 17 ವರ್ಷಗಳ ಅಭಿಮಾನಿಗಳ ಆಸೆ ಈಡೇರಿದೆ. 11 ವರ್ಷಗಳ ನಂತರ ಭಾರತ ತಂಡ ಮತ್ತೊಂದು ಐಸಿಸಿ ಟ್ರೋಫಿಯನ್ನು ಗೆದ್ದಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.
ಆದರೆ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅಷ್ಟು ಸಲೀಸಾಗಿರಲಿಲ್ಲ. ಇನ್ನೇನು ಪಂದ್ಯವನ್ನು ಸೋತೇಬಿಟ್ಟೆವು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಆಪದ್ಭಾಂದವನಂತೆ ಬಂದ ಸೂರ್ಯಕುಮಾರ್ ಹಿಡಿದ ಆ ಒಂದು ಕ್ಯಾಚ್‌ನಿಂದ ಭಾರತ ಫೈನಲ್‌ನಲ್ಲಿ ಗೆಲ್ಲುವಂತಾಯಿತು. ಅವರು ಬ್ಯಾಟ್‌ಂಗ್ ನಲ್ಲಿ ದಯನೀಯವಾಗಿ ವಿಫಲರಾದರೂ, ಕೊನೆಯ ಓವರ್‌ನಲ್ಲಿ ಸೂರ್ಯ ಹಿಡಿದ ಕ್ಯಾಚ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಇದೊಂದು ಕ್ಯಾಚ್ ನಿಂದಾಗಿ ಪವಾಡ ಸದೃಶ ರೀತಿಯಲ್ಲಿ ಗೆಲುವು ದಾಖಲಿಸಿತು.
https://x.com/elvisharmy/status/1807113921758666787?t=2xx20hRsNcK6eIxkyLCwtA&s=19
T20 ವಿಶ್ವಕಪ್ ಫೈನಲ್ ಗೆಲ್ಲಲು ದಕ್ಷಿಣ ಆಫ್ರಿಕಾಗೆ 6 ಎಸೆತಗಳಲ್ಲಿ 16 ರನ್ ಗಳಿಸಬೇಕಾಗಿತ್ತು. ತಂಡವು ತುಂಬಾ ಒತ್ತಡದಲ್ಲಿತ್ತು. ಕ್ರೀಸ್‌ನಲ್ಲಿ ಡೇವಿಡ್ ಮಿಲ್ಲರ್ ಅವರಂತಹ ಉತ್ತಮ ಬ್ಯಾಟ್ಸ್‌ಮನ್ ಇದ್ದರು. ಈ ಹಂತದಲ್ಲಿ ಭಾರತೀಯ ಅಭಿಮಾನಿಗಳು ಕೂಡಾ ಆತಂಕದಲ್ಲಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಅವರ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಪವಾಡ ಸಂಭವಿಸಿತು. ಮಿಲ್ಲರ್ ಚೆಂಡನ್ನು ಲಾಂಗ್ ಆಫ್ ಕಡೆಗೆ ಭಾರಿ ಸಿಕ್ಸರ್ ಗೆ ಹೊಡೆಯಲು ಯತ್ನಿಸಿದರು.
ಆದರೆ ಎಂತಹ ಒತ್ತಡದಲ್ಲೂ ಸೂರ್ಯಕುಮಾರ್ ವಿಚಲಿತರಾಗದೇ ಬೌಂಡರಿ ಬಳಿ ಇಡೀ ಕ್ರಿಕೆಟ್ ಜಗತ್ತೇ ಬೆರಗಾಗುವಂತಹ ಕ್ಯಾಚ್ ಹಿಡಿದರು. ಚೆಂಡು ಸಿಕ್ಸರ್‌ಗೆ ಹೋಗುತ್ತಿದ್ದಂತೆ ಅದ್ಭುತವಾಗಿ ಕ್ಯಾಚ್ ಹಿಡಿದರು. ಬೌಂಡರಿ ಲೈನ್ ನಲ್ಲಿ ಕ್ಯಾಚ್ ಹಿಡಿದು ಚೆಂಡನ್ನು ಗಾಳಿಯಲ್ಲಿ ತೂರಿ ಮತ್ತೆ ಬೌಂಡರಿ ಗೆರೆಯಾಚೆ ಹೋಗಿ ಮತ್ತೆ ಒಳಗೆ ಬಂದು ಕ್ಯಾಚ್ ಪಡೆದರು. ಇದರೊಂದಿಗೆ ಮಿಲ್ಲರ್ ಅವರನ್ನು ಔಟ್ ಮಾಡಿದರು. ಈ ಕ್ಯಾಚೇ ಇಡೀ ಪಂದ್ಯದ ಚಿತ್ರಣವೇ ಬದಲಾಗಿ ಹೋಯಿತು.
ಒಂದು ವೇಳೆ ಸೂರ್ಯಕುಮಾರ್ ಈ ಕ್ಯಾಚ್ ಹಿಡಿಯದೇ ಹೋಗಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ಪಂದ್ಯಗಳನ್ನು ಅಮೋಘವಾಗಿ ಮುಗಿಸಲು ಹೆಸರಾಗಿರುವ ಮಿಲ್ಲರ್ ಅವರೇ ದಕ್ಷಿಣ ಆಫ್ರಿಕಾವನ್ನು ಗೆಲ್ಲಿಸುತ್ತಾರೆ ಎಂದೇ ಅಂದುಕೊಂಡಿದ್ದರು. ಆದರೆ ಹಾರ್ದಿಕ್ ಮತ್ತು ಸೂರ್ಯ ಜೋಡಿಯು ಚೊಚ್ಚಲ ಬಾರಿಗೆ ಕಪ್ ಗೆಲ್ಲುವ ದಕ್ಷಿಣ ಆಫ್ರಿಕಾ ತಂಡದವರ ಆಸೆಯನ್ನು ಹುಸಿಯಾಗಿಸಿದರು. ಇದು ಕೋಟ್ಯಂತರ ಭಾರತೀಯರನ್ನು ಹೆಮ್ಮೆಯಿಂದ ಹಿಗ್ಗುವಂತೆ ಮಾಡಿತು. ಇಷ್ಟು ಒತ್ತಡದಲ್ಲಿ ಸೂರ್ಯ ಹಿಡಿದ ಕ್ಯಾಚ್ ನಿಜಕ್ಕೂ ಟೂರ್ನಿಯ ಕ್ಯಾಚ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆ ಕ್ಯಾಚ್ ಸರಿಯಾಗಿದೆಯೇ?
ಆದರೆ, ಸೂರ್ಯಕುಮಾರ್ ಕ್ಯಾಚ್ ಬಗ್ಗೆ ಅನುಮಾನಗಳಿವೆ. ಈ ವೇಳೆ ಚೆಂಡು ಕೈಗೆ ಸಿಕ್ಕಾಗ ಕಾಲು ಬೌಂಡರಿ ಗೆರೆಗೆ ಬಡಿದಿರುವುದು ಕೆಲ ರೀಪ್ಲೇಗಳಲ್ಲಿ ಕಂಡು ಬಂದಿತ್ತು. ಆದರೆ, ಅಂಪೈರ್ ಭಾರತಕ್ಕೆ ಉಪಕಾರ ಮಾಡುತ್ತಿದ್ದಾರೆ ಎಂದು ಹಲವರು ಈ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ತಂಡ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.
ಆದರೆ ಸೂರ್ಯ ಕುಮಾರ್ ಹಿಡಿದ ಈ ಕ್ಯಾಚ್ 2007 ರ ಟಿ20 ವಿಶ್ವಕಪ್‌ನ ಕೊನೆಯ ಓವರ್‌ನಲ್ಲಿ ಶ್ರೀಶಾಂತ್ ಹಿಡಿದ ಪಾಕಿಸ್ತಾನದ ಆಟಗಾರ ಮಿಸ್ಬಾ ನೀಡಿದ ಕ್ಯಾಚ್‌ನಂತೆಯೇ ಇತ್ತು. ಆ ಕ್ಯಾಚ್ ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ತಂದುಕೊಟ್ಟಿತ್ತು. ಇಂದಿನ ಈ ಕ್ಯಾಚ್ 17 ವರ್ಷಗಳ ನಿರೀಕ್ಷೆಗೆ ತೆರೆ ಎಳೆದು ಮತ್ತೊಂದು ವಿಶ್ವಕಪ್ ತಂದು ಕೊಟ್ಟಿತು. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಇದುವರೆಗೂ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂಬ ಅಪವಾದವನ್ನು ಟೀಂ ಇಂಡಿಯಾ ಈ ಗೆಲುವಿನೊಂದಿಗೆ ಅಳಿಸಿ ಹಾಕಿದೆ. ಹ್ಯಾಟ್ಸ್ ಆಫ್ ಟು ಟೀಮ್ ಇಂಡಿಯಾ.