ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : 12 ಮಂದಿ ಸಜೀವ ದಹನ
ಸುದ್ದಿಒನ್, ಮಧ್ಯಪ್ರದೇಶ, ಡಿಸೆಂಬರ್.28 : ಬುಧವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಂದೆ ಬರುತ್ತಿದ್ದ ಪ್ರಯಾಣಿಕರ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಇದರಿಂದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 12 ಮಂದಿ ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೂ 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗುನಾ-ಆರನ್ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. 12 ಮಂದಿ ಸಜೀವ ದಹನವಾಗಿದ್ದಾರೆ.
ಅವರಲ್ಲಿ 9 ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇತರ 13 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗುನಾ ಜಿಲ್ಲಾಧಿಕಾರಿ ತರುಣ್ ರಾಠಿ ಟ್ವೀಟ್ ಮಾಡಿದ್ದಾರೆ. ಬೆಂಕಿಯಲ್ಲಿ ಶವಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿವೆ ಎಂದು ಹೇಳಲಾಗಿದ್ದು, ಗುರುತಿಸಲು ಡಿಎನ್ ಎ ಪರೀಕ್ಷೆ ನಡೆಸಲಾಗುತ್ತಿದೆ. ಅಪಘಾತದ ಸ್ಥಳದಿಂದ ಎಲ್ಲಾ ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದರು. ಅಪಘಾತದ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ. ಮಾಹಿತಿ ಪಡೆದ ನಂತರ ಮುಖ್ಯಮಂತ್ರಿ ಮೋಹನ್ ಯಾದವ್ ಅಪಘಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಗಾಯಗೊಂಡಿರುವ ಪ್ರತಿಯೊಬ್ಬರಿಗೂ ರೂ.50 ಸಾವಿರ ನೀಡಲಾಗುವುದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಯಾದವಾಡ ಸೂಚಿಸಿದ್ದಾರೆ.