ತಿರುಪತಿ ಲಡ್ಡು ವಿವಾದ ಕೇಳಿ ಆಶ್ಚರ್ಯ ಆಯ್ತು : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಸದ್ಯ ದೇಶದೆಲ್ಲೆಡೆ ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡು ವಿಚಾರವೇ ಸದ್ದು ಮಾಡುತ್ತಿದೆ. ಪ್ರಸಾದಕ್ಕೆ ಪ್ರಾಣಿ ಕೊಬ್ಬನ್ನು ಬಳಕೆ ಮಾಡುತ್ತಾರೆ ಎಂಬ ವಿಚಾರ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಇದೀಗ ಈ ಬಗ್ಗೆ ಕೆ.ಎಸ್.ಈಶ್ವರಪ್ಪ ಕೂಡ ಶಾಕ್ ಆಗಿದ್ದಾರೆ.
ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ತಿರುಪತಿ ಲಡ್ಡುವಿನಲ್ಲಿ ಕೊಬ್ಬು ವಿಚಾರ ಕೇಳಿ ಆಶ್ಚರ್ಯ ಆಯ್ತು. ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಭಕ್ತಿ ತುಂಬಿರುತ್ತದೆ. ಆದರೆ ಅದನ್ನು ಗೋಮಾತೆಯ ಕೊಬ್ಬು ಸೇರಿಸಿ ತಯಾರು ಮಾಡ್ತಾ ಇರೋದು ತುಂಬಾ ನೋವಾಯ್ತು. ಈಗಾಗಲೇ ತನಿಖೆ ಮಾಡಿದ್ದಾರೆ. ವರದಿಯನ್ನು ಕೊಟ್ಟಿದ್ದಾರೆ. ಈ ವಿಚಾರದಲ್ಲಿ ದ್ವೇಷ ಸಾಧನೆ ಮಾಡುವುದಕ್ಕೆ ಹೋಗಬಾರದು. ಜಗನ್ ಮೋಹನ್ ರೆಡ್ಡಿ ಸರ್ಕಾರವಿದ್ದಾಗ ಈ ರೀತಿ ಮಾಡಿದ್ದಾರೆ. ಇಡೀ ಪ್ರಪಂಚದಲ್ಲಿರುವ ಹಿಂದೂಗಳ ಭಾವನೆಗೆ ಇದರಿಂದ ನೋವುಂಟಾಗಿದೆ.
ಲಡ್ಡು ತಯಾರಿಕೆಯಲ್ಲಿ ಮೀನಿನ ಎಣ್ಣೆ, ಗೋವಿನ ಕೊಬ್ಬು, ಹಂದಿ ಕೊಬ್ಬು ಬಳಸಿದ್ದಾರೆ. ಮತಾಂತರಗೊಂಡಿರುವ ಜಗನ್ ಮೋಹನ್ ರೆಡ್ಡಿ ಈ ರೀತಿ ಮಾಡಿದ್ದಾರೆ. ತಿರುಪತಿಗೆ ಹೋದ ಪ್ರತಿಯಿಬ್ಬರು ಲಡ್ಡು ತರಲೇಬೇಕೆಂದು ತರುತ್ತಾರೆ. ಮನೆ ಮಂದಿ, ಕುಟುಂಬಸ್ಥರು ಅದನ್ನು ಪ್ರಸಾದವಾಗಿ ಸೇವಿಸುತ್ತಾರೆ. ಮಾಂಸ ತಿನ್ನದೆ ಇರುವ ಅನೇಕ ಭಕ್ತರಿಗೆ ಇದರಿಂದ ನೋವಾಗಿದೆ. ಜಗನ್ ಮೋಹನ್ ರೆಡ್ಡಿ, ಅಧ್ಯಕ್ಷ ಸುಬ್ಬಾರೆಡ್ಡಿ ಅವರನ್ನು ಈ ಪ್ರಕರಣದಲ್ಲಿ ಮೊದಲು ಬಂಧಿಸಬೇಕು. ಈ ಪ್ರಕರಣ ಸಿಬಿಐ ತನಿಖೆಯಾಗಬೇಕು. ಯಾರು ಯಾರು ಬೆಂಬಲ ಬೆಂಬಲ ಕೊಟ್ಟಿದ್ದಾರೆ, ಅವರ ಮೇಲೆ ಕ್ರಮ ಆಗಬೇಕು. ಇದನ್ನು ಹಿಂದೂ ಸಮಾಜ ಒಪ್ಪಲ್ಲ. ಇದು ಪರೋಕ್ಷವಾಗಿ ವಿಷ ಕೊಟ್ಟಿರುವ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.