ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ : ಸಚಿವ ನಾಗೇಂದ್ರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ
ಶಿವಮೊಗ್ಗ: ಇತ್ತಿಚೆಗಷ್ಟೇ 87 ಕೋಟಿ ಅವ್ಯವಹಾರದಿಂದ ವಾಲ್ಮೀಕಿ ಅಭಿವೃದ್ಧಿ ನಿಗಮ ಬಾರೀ ಚರ್ಚೆಗೆ ಗ್ರಾಸವಾಗಿದೆ. ಅದರ ಅಧೀಕ್ಷಕರಾಗಿದ್ದ ಚಂದ್ರಶೇಖರ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಚುವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಚಂದ್ರಶೇಖರ್ ಮನೆಗೆ ಭೇಟಿ ನೀಡಿದ ಬಿವೈ ವಿಜಯೇಂದ್ರ ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಬಳಿಕ ಮಾತಮಾಡಿದ ವಿಜಯೇಂದ್ರ ಅವರು, ನಮ್ಮ ಎರಡು ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒಂದು ವಾರಗಳ ಗಡುವು ನೀಡುತ್ತೇನೆ. ಬೇಡಿಕೆ ಈಡೇರಿಸದೆ ಇದ್ದರೆ ಮುಂದಿನ ವಾರವೇ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೇ ತಮ್ಮ ಎರಡು ಬೇಡಿಕೆಯನ್ನು ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಹಣಕಾಸಿನ ವರ್ಗಾವಣೆ ನಡೆದಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಈ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರವನ್ನು ಎಟಿಎಂ ರೀತಿಯಲ್ಲಿ ಬಳಕೆ ಮಾಡಿಕೊಂಡಿದೆ. ಸಚಿವ ನಾಗೇಂದ್ರ ಗಮನಕ್ಕೆ ಬಾರದೆ ಈ ಅಕ್ರಮ ನಡೆದಿಲ್ಲ. ನಾವೂ ಆರೋಪ ಮಾಡಿದಾಗ ದಾಖಲೆ ಎಲ್ಲಿ ಎನ್ನುತ್ತಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಬಳಿ ದಾಖಲೆಗಳನ್ನು ಕೇಳುತ್ತಿದ್ದರು. ಸರ್ಕಾರ ಈಗ ಈ ಹಗರಣಕ್ಕೆ ಉತ್ತರ ನೀಡಬೇಕಿದೆ. ಇದು ರಾಜ್ಯದ ದೊಡ್ಡ ಅವ್ಯವಹಾರ. ಇದರಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇರುವುದು ಸ್ಪಷ್ಟವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಸಚಿವ ನಾಗೇಂದ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮಾತ್ರ ಅವ್ಯವಹಾರ ನಡೆದಿರುವುದಲ್ಲ. ಬೇರೆ ನಿಗಮದಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ. ಲೋಕಸಭಾ ಚುನಾವಣೆಯಲ್ಲಿ ಈ ಹಣ ಬಳಕೆಯಾಗಿರಬಹುದು. ಇದರ ತನಿಖೆಯಾಗಬೇಕು. ಸಿಬಿಐಗೆ ನೀಡಿದಾಗ ಮಾತ್ರ ಸತ್ಯ ಹೊರಗೆ ಬರಲಿದೆ ಎಂದಿದ್ದಾರೆ.