ಅಧಿಕೃತವಾಗಿ ಬಿಜೆಪಿ ಸೇರಿದ ಸುಮಲತಾ : ಬಾವುಟ ಹಿಡಿದು ಮೋದಿ ಮತ್ತೆ ಪ್ರಧಾನಿಯಾಗಬೇಕು ಅಂದ್ರು..!
ಬೆಂಗಳೂರು: ಸಂಸದೆ ಸುಮಲತಾ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿಯಿಂದಾನೇ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಜೆಡಿಎಸ್ ಜೊತೆಗೆ ಮೈತ್ರಿಯಾದ ಕಾರಣ, ಮಂಡ್ಯ ಜೆಡಿಎಸ್ ಪಾಲಾಗಿದೆ. ಆದರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂಬ ಊಹೆ ತಪ್ಪಾಗಿದ್ದು, ಜೆಡಿಎಸ್ ಗೆ ಬಿಟ್ಟು ಬಿಜೆಪಿ ಸೇರಿದ್ದಾರೆ.
ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ ಸುಮಲತಾ, ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ಘೋಷ ವಾಕ್ಯ ಹೇಳಿದ್ದಾರೆ. ಬಿವೈ ವಿಜಯೇಂದ್ರ, ಆರ್ ಅಶೋಕ್ ಕೂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸುಮಲತಾ, ಇಂದಿನ ದಿನ ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದ ದಿನವಾಗಿದೆ. ಐದು ವರ್ಷಗಳ ಹಿಂದೆ ಮಂಡ್ಯದಲ್ಲಿ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ, ಆ ಸಂದರ್ಭವನ್ನು ಎಂದಿಗೂ ಮರೆಯುವುದಿಲ್ಲ. ಮಂಡ್ಯದ ಜನ ಹಾಗೂ ಅಂಬರೀಶ್ ಅಭಿಮಾನಿಗಳ ಬಳಗ ನನಗೆ ಬೆನ್ನೆಲುಬಾಗಿ ನಿಂತಿದೆ.
ಮಂಡ್ಯದಲ್ಲಿ ನಾನು, ಜೆಡಿಎಸ್ ಅಥವಾ ಕುಮಾರಸ್ವಾಮಿಯವರಿಗೆ ಮಾತ್ರ ಬರುವುದಿಲ್ಲ. ಬದಲಿಗೆ ಎನ್‌ಡಿಎ ಹೆಚ್ಚು ಸೀಟು ಪಡೆಯಬೇಕು. ಐದು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನನಗೆ ಬೆಂಬಲ ನೀಡಿದ್ದರು. ಪಕ್ಷ ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಕ್ಕೆ ಹೇಳುತ್ತದೆಯೋ ಆ ಕಡೆ ಪ್ರಚಾರ ಮಾಡುತ್ತೇನೆ. ಮಂಡ್ಯ ಮಾತ್ರವಲ್ಲ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಬೇಕು. 2046ರ ವೇಳೆಗೆ ದೇಶವನ್ನು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ ಎಂದು ಸುಮಲತಾ ಹೇಳಿದ್ದಾರೆ.