ಮೈತ್ರಿ ಧರ್ಮ ಪಾಲನೆಗೆ ಸಿದ್ಧ ಎಂದ ಸುಮಲತಾ : ಸ್ಪರ್ಧೆಯಿಂದ ಹಿಂದೆ ಸರಿದು ಬಿಟ್ರಾ..?
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ರಣಕಣದಲ್ಲಿ ಜೆಡಿಎಸ್ ಮತ್ತು ಸುಮಲತಾ ಹೆಸರು ಜೋರಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಮತಗಳಿಂದ ಗೆದ್ದ ಸುಮಲತಾ, ಈ ಬಾರಿ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿದ್ದರು. ಆದರೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡ ಬಿಜೆಪಿ ದಳಪತಿಗಳಿಗೆ ಸುಲಭವಾಗಿ ಬಿಟ್ಟುಕೊಟ್ಟಿತ್ತು. ಮಂಡ್ಯದಿಂದಾನೇ ನಾನು ನಿಲ್ಲುವುದು ಎಂದು ಗಟ್ಟಿಯಾಗಿ ಧ್ವನಿ ಎತ್ತಿದ್ದ ಸುಮಲತಾ ಇದೀಗ ಮೈತ್ರಿ ಧರ್ಮ ಪಾಲನೆಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ಮಂಡ್ಯವನ್ನು ಬಿಟ್ಟು ಕೊಡುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್ ಹೇಳಿದರೆ ಮೈತ್ರಿ ಧರ್ಮ ಪಾಲನೆಗೆ ನಾನು ಸಿದ್ಧ. ಆದರೆ ಜೆಡಿಎಸ್ ಗೆ ನನ್ನ ಅಗತ್ಯ ಇದೆಯಾ ಎಂದು ಮೊದಲು ತಿಳಿದುಕೊಳ್ಳಬೇಕು. ಬೇರೆ ಕಡೆ ನಿಲ್ಲಿ, ಗೆಲುವು ನಿಮಗೆ ಸುಲಭ ಎಂಬ ಆಫರ್ ನನಗೆ ಇದೆ. ಹೆಸರು ಇದೆ, ಗೆಲುವು ಸುಲಭ, ಇಷ್ಟೊಂದು ಕಷ್ಟ ಆಗಲ್ಲ. ಆದರೆ ನನಗೆ ಬೇರೆ ಬೇಕಿಲ್ಲ. ನನಗೆ ಮಂಡ್ಯನೆ ಬೇಕು.
ಮಂಡ್ಯಕ್ಕೂ ನನಗೂ ಭಾವನಾತ್ಮಕವಾದ ಸಂಬಂಧ ಇದೆ. ಬಿಜೆಪಿ ಹೈಕಮಾಂಡ್ ಹೇಳಿದ್ರೆ ಸಹಕಾರ ನೀಡೋಕೆ ನಾನು ಸಿದ್ಧ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಸುಮಲತಟ ಅವರು, ಅದರಲ್ಲೂ ಮಂಡ್ಯಕ್ಕೆ ಅಭ್ಯರ್ಥಿಯಾಗಿ ಬಂದ ಸ್ಟಾರ್ ಚಂದ್ರು ವಿರುದ್ಧ ಮಾತಿನ ಬಾಣ ಪ್ರಯೋಗಿಸಿ, ಹಣಕ್ಕಾಗಿ ಕಾಂಗ್ರೆಸ್ ಟಿಕೆಟ್ ಮಾರಾಟವಾಗಿದೆ ಅನ್ನೋ ಗಂಭೀರ ಆರೋಪ ಹೊರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಣಕ್ಕಾಗಿ ಟಿಕೆಟ್ ಮಾರಾಟವಾಗಿದೆ ಎಂದಿದ್ದಾರೆ.