ಚುನಾವಣಾ ತಯಾರಿಯಲ್ಲಿ ಸುಮಲತಾ : ಪ್ಲ್ಯಾನ್ ಹೇಗಿದೆ..?
ಮಂಡ್ಯ: ಈ ಬಾರಿಯ ಲೋಕಸಭೆಯಲ್ಲೂ ಮಂಡ್ಯ ಹೈಲೇಟ್ ಆಗಲಿದೆ. ಈಗಾಗಲೇ ಸುಮಲತಾ ತಾನೂ ಮಂಡ್ಯದಿಂದಾನೇ ಸ್ಪರ್ಧೆ ಮಾಡೋದು ಖಚಿತ ಎಂದು ಸಾರಿದ್ದಾರೆ. ಇನ್ನು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಕೂಡ ಮಂಡ್ಯ ಬಿಡುವ ಮಾತೇ ಇಲ್ಲ ಎಂದಿದ್ದಾರೆ. ಚುನಾವಣೆ ಸನಿಹವಾಗುತ್ತಿದ್ದಂತೆ ಮಂಡ್ಯ ನೆಲದಲ್ಲಿ ಯಾರ ಭವಿಷ್ಯ ಏನಾಗಬಹುದು ಎಂಬ ಲೆಕ್ಕಚಾರಕ್ಕೆ ಉತ್ತರ ಸಿಗಲಿದೆ.
ಆದರೆ ಸುಮಲತಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಶುರು ಮಾಡಿದ್ದಾರೆ. ಶೀಘ್ರದಲ್ಲಿಯೇ ಎಲ್ಲಾ ಜಿಲ್ಲೆಯ ತಾಲೂಕುಗಳಿಗೂ ಪ್ರವಾಸ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿರುವ ಸುಮಲತಾ, ಚುನಾವಣೆ ಕುರಿತಾಗಿ ನನ್ನ ನಿರ್ಧಾರವನ್ನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಸ್ಪರ್ಧೆ ಕುರಿತು ಪಕ್ಷ ತೀರ್ಮಾನ ಮಾಡಬೇಕಿದೆ. ಈ ಸಮಯದಲ್ಲಿ ನನ್ನ ಬೆಂಬಲಿಗರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ನನ್ನ ಬೆಂಬಲಿಗರಿಗೆ ಯಾವುದೇ ರೀತಿಯ ಗೊಂದಲವಾಗಬಾರದು. ಅವರಲ್ಲಿ ವಿಶ್ವಾಸ ತುಂಬಿವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ತೆರಳಿ ಮುಖಂಡರೊಂದಿಗೆ ಸಭೆ ನಡೆಸಿ, ಮಾತನಾಡುತ್ತೇನೆ.
ಈ ಸಭೆಗಳನ್ನು ಮಾಡುತ್ತಿರುವುದೇ ಚುನಾವಣೆಯ ಸಂಬಂಧ. ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿದ್ದೆ. ಈಗ ಬೇರೆ ರೀತಿಯಾಗಿ ಭೇಟಿ ಮಾಡುತ್ತೇನೆ. ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ತಾಲೂಕುಗಳಿಗೆ ಭೇಟಿ ಮಾಡುತ್ತೇನೆ. ಅದಕ್ಕೂ ಮೊದಲು ಆದಿಚುಂಚನಗಿರಿಯ ಸ್ವಾಮೀಜಿಗಳ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುತ್ತೇನೆ. ಐದು ವರ್ಷಗಳ ಕಾಲ ಪಕ್ಷೇತರ ಅಭ್ಯರ್ಥಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಈಗ ಹಾಗಿಲ್ಲ. ಪಕ್ಷದಿಂದ ಬರುವ ಸೂಚನೆಯ ಮೇರೆಗೆ ಕೆಲಸ ಮಾಡಬೇಕಿದೆ. ಮಂಡ್ಯ ಎಲೆಕ್ಷನ್ ವಿಶೇಷವಾಗಿ ನಡೆಯುತ್ತದೆ. ಕಳೆದ ಚುನಾವಣೆಯಲ್ಲಿ ಎದುರಾದ ಸವಾಲುಗಳನ್ನು ಎದುರಿಸಿ ಗೆದ್ದಿದ್ದೇನೆ. ಪಕ್ಷದಲ್ಲಿ ಹಲವು ಹಿರಿಯರು ಇದ್ದಾರೆ. ಈಗ ಅವರು ಮಾರ್ಗದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.