ಲೆಫ್ಟಿನೆಂಟ್ ಆಗಿ ಬಡ್ತಿ ಪಡೆದ ಚಿತ್ರದುರ್ಗದ ಯೋಧ ಬಾಲಚಂದ್ರ : ಸುದ್ದಿ ಒನ್ ಜೊತೆಗೆ ವಿಶೇಷ ಸಂದರ್ಶನ
ಸುದ್ದಿಒನ್, ಜನವರಿ.02 : ದೇಶ ಕಾಯುವ ಯೋಧರನ್ನ ನಾವೆಲ್ಲಾ ದೇವರು ಎಂದೇ ಪೂಜಿಸುತ್ತೇವೆ. ತಮ್ಮೆಲ್ಲ ಸುಖ-ಸಂತೋಷವನ್ನ ಬದಿಗಿಟ್ಟು ದೇಶದ ರಕ್ಷಣೆಗಾಗಿ ಗಡಿಯಲ್ಲಿ ಕಾಯುತ್ತಾ ನಿಲ್ಲುತ್ತಾರೆ. ಅವರ ತ್ಯಾಗದ ಮುಂದೆ ಎಲ್ಲರೂ ತಲೆಬಾಗಲೇಬೇಕು. ದೇಶ ಸೇವೆಗೆಂದು ತಮ್ಮನ್ನು ತಾವೂ ಮುಡಿಪಿಟ್ಟವರಿಗೆ ಬಡ್ತಿ ಸಿಗುತ್ತಾ ಹೋದಾಗ ಸಾರ್ಥಕತೆ ಹೆಚ್ಚಾಗುತ್ತದೆ, ಆ ಸೈನಿಕರ ಆತ್ಮವಿಶ್ವಾಸವೂ ಗಟ್ಟಿಯಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಯೋಧ ಬಾಲಚಂದ್ರ ಅವರು ಇದೀಗ ಜಮ್ಮುವಿನಲ್ಲಿ ಲೆಫ್ಟಿನೆಂಟ್ ಆಗಿ ಪ್ರಮೋಟ್ ಆಗಿದ್ದಾರೆ. ಇದೇ ಖುಷಿಯಲ್ಲಿ ಸುದ್ದಿ ಒನ್ ಜೊತೆಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.
ಲೆಫ್ಟಿನೆಂಟ್ ಬಾಲಚಂದ್ರ.. ಹಿನ್ನೆಲೆ ಏನು..?
'ನನ್ನದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹುಟ್ಟಿದ ಊರು. ಆದರೆ ಬೆಳೆದಿದ್ದೆಲ್ಲಾ ಹಾಸನದ ಸಕಲೇಶಪುರದಲ್ಲಿ. ಅಲ್ಲಿಯೇ ಹೈಸ್ಕೂಲ್ ಕಂಪ್ಲೀಟ್ ಮಾಡಿ, ಹಾಸನದಲ್ಲಿ ಕಾಲೇಜು ಶಿಕ್ಷಣ ಮುಗಿಸಿದೆ. ಶ್ರೀಮತಿ ಎಲ್. ವಿ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ್ದು. ಚಿತ್ರದುರ್ಗ ಜಿಲ್ಲೆ ಎಂದರೆ ಹುಟ್ಟಿದ ಊರು ಎಂಬ ವ್ಯಾಮೋಹ, ಹಾಸನ ಎಂದರೆ ಬಲು ಪ್ರೀತಿ. ಆ ಪ್ರೀತಿ ಸದಾ ಜೊತೆಗೆ ಇರುತ್ತದೆ'.
ಆರ್ಮಿಗೆ ಸೇರಬೇಕು ಎಂಬುದಕ್ಕೆ ಸ್ಪೂರ್ತಿ ಏನು..?
'ಆರ್ಮಿಗೆ ಸೇರುವುದಕ್ಕೆ ಸ್ಪೂರ್ತಿಯಾಗಿದ್ದು ಸೈನಿಕ ಸಿನಿಮಾ. 3ನೇ ತರಗತಿಯಲ್ಲಿ ಓದುತ್ತಿದ್ದಾಗ ಆ ಸಿನಿಮಾ ನೋಡಿ ಸ್ಪೂರ್ತಿ ಪಡೆದಿದ್ದೆ. ಅದಾದ ಬಳಿಕ ಸೇನೆಗೆ ಸಂಬಂಧ ಪಟ್ಟಂತ ಎಲ್ಲಾ ಸಿನಿಮಾಗಳನ್ನು ನೋಡುವುದಕ್ಕೆ ಶುರು ಮಾಡಿದೆ. ನಾನು ಆರ್ಮಿಗೆ ಸೇರುವುದಕ್ಕೆ ಸಿನಿಮಾಗಳೇ ಕಾರಣ ಎನ್ನಬಹುದು'.
ಆರ್ಮಿಗೆ ಸೇರಿದ ಮೊದಲ ದಿನ ಹೇಗಿತ್ತು..?
'ಆರ್ಮಿಗೆ ಸೇರಿದಾಗ, ಆ ಯೂನಿಫಾರ್ಮ್ ತೊಟ್ಟಾಗ ತುಂಬಾ ಖುಷಿಯಾಗಿದ್ದೆ. Excitement ಇತ್ತು. ಯಾಕಂದ್ರೆ ಅದು ನನ್ನ ಕನಸಾಗಿತ್ತು. ಆ ಯೂನಿಫಾರ್ಮ್ ಹಾಕಿದಾಗಿನ ಫಸ್ಟ್ ಫೋಟೋ ಈಗಲೂ ನನ್ನ ಕಣ್ಣಲ್ಲಿ ಹಾಗೇ ಇದೆ. ದೇಶ ಸೇವೆ ಮಾಡುವುದಕ್ಕೆ ಅಂತ ನಿಂತರೆ ಆ ಉತ್ಸಾಹ ಸದಾ ಜೊತೆಯಾಗಿಯೇ ಇರುತ್ತದೆ. ಈಗಲೂ ಅದೇ ಜೋಶ್ ಇದೆ'.
'ಆರಂಭದಿಂದ ತರಬೇತಿ ಮುಗಿಸಿಕೊಂಡು ಅಮೃತಸರದಲ್ಲಿ ಪೋಸ್ಟಿಂಗ್ ಆಯ್ತು. ಅಲ್ಲಿನೇ ಮೂರುವರೆ ವರ್ಷ ಸೇವೆ ಸಲ್ಲಿಸಿದ್ದೇನೆ. ಅಮೃತಸರದಲ್ಲಿದ್ದಾಗ ನಮ್ಮ ಕಮಾಂಡರ್ ಆಫೀಸರ್ ಕರ್ನಲ್ ಆರ್ ಶ್ರೀಕಾಂತ್ ಭಾರ್ಗವ ಅವರ ಮಾರ್ಗದರ್ಶನದಲ್ಲಿ ಸರ್ವೀಸ್ ಸೆಲೆಕ್ಷನ್ ಬೋರ್ಡ್ ಟ್ರೈ ಮಾಡಿದೆ. ಮೊದಲ ಅಟೆಮ್ಟ್ ನಲ್ಲಿ ಸೋಲಾಯಿತು. ರೆಕಮಂಡ್ ಆಗಲಿಲ್ಲ. ಮೊದಲ ಪ್ರಯತ್ನದಲ್ಲಿಯೇ ಸೋತಾಗ ನಮ್ಮ ಕಮಾಂಡಿಂಗ್ ಆಫೀಸರ್ ಭಾರ್ಗವ ಅವರು ನನ್ನನ್ನು ಕರೆದು ಬೆನ್ನುತಟ್ಟಿ, ಧೈರ್ಯ ತುಂಬಿದರು. ಮತ್ತೆ ಹಾರ್ಡ್ ವರ್ಕ್ ಮಾಡಿದೆ. ಸೆಕೆಂಡ್ ಟೈಮ್ ಟ್ರೈ ಮಾಡಿದಾಗ ರೆಕಮಂಡ್ ಆಗಿ, ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಬಂದೆ. ಎಸ್ಎಸ್ಬಿಗೆ ಯಲ್ಲೂ ಕೋಚಿಂಗ್ ಹೋಗದೆನೆ, ಯೂಟ್ಯೂಬ್, ಬುಕ್ಸ್ ಅಂತ ಓದಿಕೊಂಡು, ಸೀನಿಯರ್ಸ್ ಆಫೀಸರ್ಸ್ ಮಾರ್ಗದರ್ಶನದಿಂದ ಎಸ್ಎಸ್ಬಿ ಕ್ಲಿಯರ್ ಮಾಡಿದೆ. ನಾಲ್ಕು ವರ್ಷದ ತರಬೇತಿ ಸುಲಭವಾಗಿರಲಿಲ್ಲ. ಭವಿಷ್ಯದಲ್ಲಿ ಒಂದು ದೊಡ್ಡ ಜವಬ್ದಾರಿಯನ್ನೇ ನಿಭಾಯಿಸಬೇಕಾಗುತ್ತದೆ. ಆ ಕಾರಣಕ್ಕಾಗಿ ಅಲ್ಲಿಂದಲೇ ಕಠಿಣ ತರಬೇತಿಯನ್ನು ನೀಡುತ್ತಾರೆ. ಕಮಾಂಡರ್ ಆಗಬೇಕಾದ ಎಲ್ಲಾ ಗುಣಗಳನ್ನು ಅಲ್ಲಿಂದ ಬೆಳೆಸಿಕೊಡುತ್ತಾರೆ. ಈ ತರಬೇತಿ ಮುಗಿಸಿ, ಇಂಡಿಯನ್ ಆರ್ಮಿಗೆ ಶಿಫ್ಟ್ ಆಗುತ್ತೇವೆ'.
ಲೆಫ್ಟಿನೆಂಟ್ ಆಗಿದ್ದೀರಿ.. ಜವಬ್ದಾರಿಗಳು ಎಷ್ಟಿದೆ..?
'ತರಬೇತಿ ಮುಗಿಸಿದ್ದೀನಿ, ಈಗ ಹೊಸ ಜವಬ್ದಾರಿ ಇದೆ. ಯಾಕಂದ್ರೆ ನಾನೀಗ ಯಂಗ್ ಆಫೀಸರ್. ನಮ್ಮ ಸೈನಿಕರಿಗೆಲ್ಲಾ ಒಂದಷ್ಟು ನಿರೀಕ್ಷೆಗಳು ಇರುತ್ತವೆ. ಆಫೀಸರ್ ಆದ ಮೇಲೆ ಒಂದಷ್ಟು ಲೀಡರ್ ಶಿಪ್ ಕ್ವಾಲಿಟಿ ಬೇಕಾಗುತ್ತದೆ. ಹೀಗಾಗಿ ಹಾರ್ಡ್ ವರ್ಕ್ ಮಾಡಬೇಕಾಗುತ್ತದೆ. ನಾನು ಮುಖ್ಯವಾಗಿ ಗಮನ ಕೊಡುವುದು ನಮ್ಮ ಸೈನಿಕರ ಆರೋಗ್ಯ, ಅವರ ರಕ್ಷಣೆ, ಅವರ ತರಬೇತಿಯನ್ನು ನೋಡಿಕೊಳ್ಳಬೇಕು' ಎಂದು ತಮ್ಮ ಕನಸ್ಸನ್ನು ಸುದ್ದಿಒನ್ ನೊಂದಿಗೆ ಹಂಚಿಕೊಂಡಿದ್ದಾರೆ.