ಏ.18ಕ್ಕೆ ನಾಮಪತ್ರ ಸಲ್ಲಿಕೆ : ಹಿಂದೆ ಸರಿಸೋ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ : ದಿಂಗಾಲೇಶ್ವರ ಶ್ರೀ
ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ಆಕ್ರೋಶಗೊಂಡ ದಿಂಗಾಲೇಶ್ವರ ಸ್ವಾಮೀಜಿಗಳು ಪಕ್ಷೇತರ ಅಭ್ಯರ್ಥಿಯಾಗಿ ಹುಬ್ಬಳ್ಳಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯವೂ ಶುರುವಾಗಿದೆ. ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ. ಇನ್ನು ಲೋಕಸಭೆಯ ಚುನಾವಣೆಯಲ್ಲಿ ಶ್ರೀಗಳು ಸ್ಪರ್ಧೆ ಮಾಡುತ್ತೀವಿ ಎಂದು ಘೋಷಿಸಿದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ದಿಂಗಾಲೇಶ್ವರ ಶ್ರೀಗಳಿಗೆ ಅದ್ದೂರಿ ಸ್ಚಾಗತ ಸಿಕ್ಕಿದೆ. ಇದೆ ವೇಳೆ ಪ್ರಹ್ಲಾದ್ ಜೋಶಿ ವಿರುದ್ಧ ಸ್ವಾಮೀಜಿಗಳ ಬೆಂಬಲಿಗರು ಧಿಕ್ಕಾರ ಕೂಗಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಪಕ್ಷಗಳ ವಿಚಾರ ನನಗೆ ಮಾಧ್ಯಮದಿಂದ ಅಷ್ಟೇ ತಿಳಿದಿದೆ. ಯಾವುದೇ ಪಕ್ಷಗಳ ಸೇರ್ಪಡೆ ವಿಚಾರವನ್ನು ನಾನು ಸ್ವಾತಂತ್ರ್ಯವಾಗಿ ಹೇಳುವುದಿಲ್ಲ. ಅಕಸ್ಮಾತ್ ಆ ರೀತಿಯ ಚರ್ಚೆ ಬಂದರೆ ನಾನು ಖಂಡಿತ ಮತ್ತೊಮ್ಮೆ ಚರ್ಚೆ ಮಾಡ್ತೀನಿ. ಈಗಾಗಲೇ ಬಹುಸಂಖ್ಯಾತರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಎಲ್ಲಾ ವಿಚಾರಗಳು ನನ್ನ ತಲೆಯಲ್ಲಿ ಇದಾವೆ. ನಾನು ಸಾರ್ವಜನಿಕರ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳುತ್ತೇನೆ. ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸುವ ವ್ಯಕ್ತಿ ಇನ್ನು ಭೂಮಿ ಮೇಲೆ ಹುಟ್ಟಿಲ್ಲ.
ಜನ ಬಯಸಿರುವುದರಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ಅಷ್ಟೇ ಅಲ್ಲ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದೇನೆ. ಯಡಿಯೂರಪ್ಪ ಅವರು ಕೂಡ ನನ್ನನ್ನು ಭೇಟಿಯಾಗಿಲ್ಲ. ನಾನು ಏಪ್ರಿಲ್ 18ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದಿದ್ದಾರೆ.