10 ಸಾವಿರ ಶಿಕ್ಷಕರನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಧಾರ : ಯಾವಾಗಿಂದ ಆರಂಭವಾಗಬಹುದು..?
ಬೆಂಗಳೂರು: ಶಿಕ್ಷಕ ವೃತ್ತಿ ಮಾಡಬೇಕೆಂದುಕೊಂಡವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯ ಸರ್ಕಾರ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಿರ್ಧಾರ ಮಾಡಿದೆ. ಈ ಸಂಬಂಧ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ಜೊತೆಗೆ45 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೂ ಸಿದ್ಧತೆ ನಡೆದಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ರಾಜ್ಯದಲ್ಲಿ ಕನಿಷ್ಠ 50 ಸಾವಿರ ಪ್ರಾಥಮಿಕ ಶಾಲೆಯಲ್ಲಿ 5 ಸಾವಿರ ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಹೊಸದಾಗಿ 10 ಸಾವಿರ ಶಿಕ್ಷಕರ ನೇಮಕಾತಿ ಕೈಗೊಳ್ಳಲಿದೆ. ರಾಜ್ಯ ಸರ್ಕಾರವೂ ಬಜೆಟ್ ಘೋಷಿಸಿರುವಂತೆ ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಯೂ ನೇಮಕಾತಿಗೆ ಸಂಬಂಧಿಸಿದಂತ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಿದೆ. ಶಿಕ್ಷಕ ವೃತ್ತಿಗೆ ಹೋಗುವ ಆಕಾಂಕ್ಷಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ.
ಈಗಾಗಲೇ ಆರ್ಥಿಕ ಇಲಾಖೆಗೆ ಈ ಸಂಬಂಧ ಶಿಕ್ಷಣ ಇಲಾಖೆ ಪ್ರಸ್ತಾವನೆಯನ್ನು ನೀಡಿದೆ. ಈ ಪ್ರಸ್ತಾವನೆಗೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಕ್ಕ ಕೂಡಲೇ ರಾಜ್ಯ ಸರ್ಕಾರವೂ ಶಿಕ್ಷಕರ ನೇಮಕಾತಿಯ ಪ್ರಕ್ರಿಯೇಗೆ ಅಸ್ತು ಎನ್ನುತ್ತದೆ. ಅದಕ್ಕೂ ಮುನ್ನ ಪ್ರಕ್ರಿಯೆಯ ಕೆಲಸವನ್ನು ಆರಂಭ ಮಾಡಿದೆ.
ಈ ಬಾರಿ ಹಣಕಾಸು ಇಲಾಖೆ ಪ್ರಸ್ತಾವನೆಯನ್ನು ಸ್ವೀಕರಿಸಿದರೆ ಬರೀ ಶಿಕ್ಷಕರಿಗೆ ಮಾತ್ರವಲ್ಲ, ಅತಿಥಿ ಶಿಕ್ಷಕರಿಗೂ ನೇಮಕಾತಿ ಸಿಗಲಿದೆ. ಅದೆಷ್ಟೋ ಜನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಆಸೆ ಹೊತ್ತು, ಶಿಕ್ಷಕ ವೃತ್ತಿಯೇ ಬೇಕೆಂದು ಕಾದು ಕುಳಿತಿದ್ದಾರೆ. ಅಂಥವರಿಗೆ ಇದು ಸಿಹಿ ಸುದ್ದಿಯೇ ಸರಿ. ಆದಷ್ಟು ಬೇಗ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಒಪ್ಪಲಿ ಎಂದೇ ಆಕಾಂಕ್ಷಿಗಳು ಬೇಡಿಕೊಳ್ಳುತ್ತಿದ್ದಾರೆ.