ಬೇಹುಗಾರಿಕೆ ನಡೆಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.. ಈಗ ಐಫೋನ್ ಹ್ಯಾಕ್ : ದಿನೇಶ್ ಗುಂಡೂರಾವ್ ಪ್ರಶ್ನೆ
ವಿಪಕ್ಷ ನಾಯಕರ ಐಫೋನ್ ಗಳು ಹ್ಯಾಕ್ ಆಗುತ್ತಿರುವ ಬಗ್ಗೆ ಈಗ ಸಾಕಷ್ಟು ಸುದ್ದಿಯಾಗುತ್ತಿದೆ. ಸರ್ಕಾರಿ ಪ್ರಾಯೋಜಿತ ದಾಳಿಕೋರರು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಐಫೋನ್ ಸೂಚನೆ ನೀಡುತ್ತಿದೆ. ಇದೀಗ ಈ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಕೇಳಿದ್ದಾರೆ.
ವಿಪಕ್ಷ ನಾಯಕರು ಬಳಸುತ್ತಿರುವ ಐಫೋನ್‌ಗಳನ್ನು 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಹ್ಯಾಕ್ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಸ್ವತಃ ಆ್ಯಪಲ್ ಕಂಪನಿಯೇ ಸಂದೇಶ ಕಳಿಸಿದೆ. ಇದು ವಿರೋಧ ಪಕ್ಷಗಳ ನಾಯಕರ ಮೇಲೆ ಕೇಂದ್ರ ನಡೆಸುತ್ತಿರುವ ಅಕ್ರಮ ಬೇಹುಗಾರಿಕೆ.
ಆ್ಯಪಲ್ ಸಂಸ್ಥೆಯೇ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಎಂದಿದೆ. ಹಾಗಾದರೆ ಯಾರು ಆ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು'?
ಕೇಂದ್ರ ಸರ್ಕಾರ ಪೆಗಾಸಸ್ ಕುತಂತ್ರಾಂಶ ಬಳಸಿ ವಿಪಕ್ಷ ನಾಯಕರ ಮೇಲೆ ಬೇಹುಗಾರಿಕೆ ನಡೆಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈಗ ಐಫೋನ್ ಹ್ಯಾಕ್ ಮಾಡಲು ಸರ್ಕಾರಿ ಪ್ರಾಯೋಜಿತ ದಾಳಿಕೋರರು ಪ್ರಯತ್ನಿಸುತ್ತಿರುವುದು ಕೇಂದ್ರ ಸರ್ಕಾರದ ಅಕ್ರಮ ಬೇಹುಗಾರಿಕೆಯ ಮುಂದುವರೆದ ಭಾಗವಷ್ಟೆ. ವಿಪಕ್ಷ ನಾಯಕರ ಫೋನ್ ಕದ್ದಾಲಿಸಲೆಂದಲೇ ಕೇಂದ್ರ ಕಳ್ಳಗಿವಿ ಇಟ್ಟಿರುವುದು ಸತ್ಯ.
ಆ್ಯಪಲ್ ಸಂಸ್ಥೆಯೇ ಕಳಿಸಿರುವ ಸಂದೇಶದ ಪ್ರಕಾರ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಕೇವಲ ವಿಪಕ್ಷ ನಾಯಕರು ಮಾತ್ರವಲ್ಲ, ಕೆಲ ಪತ್ರಕರ್ತರ ಐಫೋನ್‌ಗಳಿಗೂ ಕನ್ನ ಹಾಕಲು ಯತ್ನಿಸಿದ್ದಾರೆ. ಆಯ್ದ ಕೆಲವು ವಿಪಕ್ಷ ನಾಯಕರು ಹಾಗೂ ಕೆಲ ನಿರ್ದಿಷ್ಟ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಅವರ ಫೋನ್‌ಗಳಿಗೆ ಕಳ್ಳಗಿವಿ ಇಡಲಾಗಿದೆ.
ಇದು ಅಕ್ರಮ ಬೇಹುಗಾರಿಕೆಯಲ್ಲದೆ ಮತ್ತೇನು?
ವಿಪಕ್ಷ ನಾಯಕರ ಹಾಗೂ ಕೆಲ ಪತ್ರಕರ್ತರ ಐಫೋನ್‌ಗಳಿಗೆ ಕಳ್ಳಗಿವಿ ಇಡುತ್ತಿರುವ ಆ 'ಸರ್ಕಾರಿ ಪ್ರಾಯೋಜಿತ ದಾಳಿಕೋರರು' ಯಾರು ಎಂಬುದೇ ಸದ್ಯದ ಯಕ್ಷಪ್ರಶ್ನೆ. ಈ ಯಕ್ಷಪ್ರಶ್ನೆಗೆ ಉತ್ತರ ಗೊತ್ತಿರುವುದು ಪ್ರಧಾನಿ ಮೋದಿಯವರಿಗೆ ಮತ್ತು ಗೃಹಸಚಿವ ಅಮಿತ್ ಶಾರವರಿಗೆ ಮಾತ್ರ. ಆದರೆ ಇವರಿಬ್ಬರಿಗೆ ಈ ಪ್ರಶ್ನೆಗೆ ಉತ್ತರಿಸುವ ಧೈರ್ಯವಿದೆಯೇ.? ಎಂದು ಪ್ರಶ್ನಿಸಿದ್ದಾರೆ.