For the best experience, open
https://m.suddione.com
on your mobile browser.
Advertisement

ಅಂದು ಭದ್ರೆಗೆ ಭದ್ರ ಬುನಾದಿ ಹಾಕಿದ್ದ ಎಸ್.ಎಂ.ಕೃಷ್ಣ : ಇಂದು ಎಸ್ಸೆನ್ ಜನ್ಮದಿನದಂದೇ ಅಗಲಿಕೆ

06:44 AM Dec 11, 2024 IST | suddionenews
ಅಂದು ಭದ್ರೆಗೆ ಭದ್ರ ಬುನಾದಿ ಹಾಕಿದ್ದ ಎಸ್ ಎಂ ಕೃಷ್ಣ   ಇಂದು ಎಸ್ಸೆನ್ ಜನ್ಮದಿನದಂದೇ ಅಗಲಿಕೆ
Advertisement

Advertisement

ಸುದ್ದಿಒನ್, ಚಿತ್ರದುರ್ಗ : ಪದ್ಮವಿಭೂಷಣ ಪ್ರಶಸ್ತಿ ಪುರಸ್ಕತ, ಮಾಜಿ ರಾಜ್ಯಪಾಲ, ಕೇಂದ್ರದ ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌‍.ಎಂ.ಕೃಷ್ಣ (92) ಆವರು ತೀವ್ರ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ಬೆಂಗಳೂರನ್ನು ವಿಶ್ವದ ಸಿಲಿಕಾನ್‌ ವ್ಯಾಲಿ, ಮಾಹಿತಿ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಭದ್ರಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಚಿತ್ರದುರ್ಗ ಜಿಲ್ಲೆಯ ಜನರ ಕನಸಿನ ಕೂಸಾದ ಭದ್ರೆಗೆ ಭದ್ರ ಬುನಾದಿಯನ್ನು ಹಾಕಿದ್ದರು ಎಂಬುದು ಗಮನಾರ್ಹ.

Advertisement


1999-2004 ರವರೆಗೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಎಸ್.ಎಂ.ಕೃಷ್ಣ ಅವರು, ಭೀಕರ ಬರಗಾಲ, ಡಾ. ರಾಜ್ ಕುಮಾರ್ ಅಪಹರಣದಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹೆಗ್ಗಳಿಕೆ ಅವರದ್ದು. ಈ ಎಲ್ಲಾ ಸಾಲು ಸಾಲು ಸವಾಲುಗಳ ನಡುವೆ ಬಯಲುಸೀಮೆಗೆ ಭದ್ರೆ ನೀರುಣಿಸಲು ಮುನ್ನುಡಿ ಬರೆದ ಪ್ರಥಮ ರಾಜಕಾರಣಿ ಎಂಬುದು ಅವರ ಹೆಗ್ಗಳಿಕೆ. ಭದ್ರಾ ಮೇಲ್ದಂಡೆ ಯೋಜನೆ ಕೇವಲ ಚುನಾವಣಾ ಅಸ್ತ್ರವಾಗಬಾರದೆಂಬ ಅಚಲತೆ
ಹೊಂದಿದ್ದ ಎಸ್.ಎಂ.ಕೃಷ್ಣ, ವಿವಿಧ ಪ್ರಯತ್ನದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಪ್ರಯತ್ನಿಸಿದ ಮೊದಲ ಮುಖ್ಯಮಂತ್ರಿ ಎಂಬುದು ವಿಶೇಷ.

ಭದ್ರಾ ಮೇಲ್ದಂಡೆ ಜಾರಿಗಾಗಿ ಜಿಲ್ಲೆಯಲ್ಲಿ ನಾಲ್ಕು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದ ಸಂದರ್ಭ, ಪ್ರತಿ ಚುನಾವಣೆಯಲ್ಲೂ ಈ ಯೋಜನೆಯನ್ನು ಗೆಲುವಿಗಾಗಿ ಎಲ್ಲ ಪಕ್ಷಗಳ ರಾಜಕಾರಣಿಗಳು ಮೆಟ್ಟಿಲಾಗಿಸಿಕೊಳ್ಳುತ್ತಿದ್ದರು. ಕಾಂಗ್ರೆಸ್, ಭಾಜಪ, ಜನತಾ ಪರಿವಾರದ ಎಲ್ಲ ನಾಯಕರು ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಈ ಭಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಖಚಿತ ಎಂದು ಹೇಳಿ, ಬಳಿಕ ಮರೆತುಬಿಡುತ್ತಿದ್ದರು.

ರಾಜಕಾರಣಿಗಳ ಈ ಹುಸಿ ಮಾತಿಗೆ ಬೇಸತ್ತಿದ್ದ ಜಿಲ್ಲೆಯ ಜನ ರಸ್ತೆ ತಡೆ, ಬಂದ್ ಸೇರಿ ಅನೇಕ ಸರಣಿ ಚಳವಳಿ ನಡೆಸಿದ್ದರು. ಅದರಲ್ಲೂ ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಆಡಳಿತದಲ್ಲಿ ಹೋರಾಟ ಮುಗಿಲುಮುಟ್ಟಿತ್ತು. ಜೆ.ಎಚ್.ಪಟೇಲ್ ಆಡಳಿತದಲ್ಲಿ ಸ್ವತಃ ಎಸ್.ನಿಜಲಿಂಗಪ್ಪ ಉಪವಾಸ ಸತ್ಯಾಗ್ರಹ ಕೂರುವುದಾಗಿ ಘೋಷಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಅಂದು ಎಸ್ಸೆನ್ ಉಪವಾಸಕ್ಕೆ ಬೆಚ್ಚಿದ ಪಟೇಲ್ ಸರ್ಕಾರ, ತುಂಗಾ ತಿರುವು ಯೋಜನೆ ಘೋಷಿಸಿಕೈತೊಳೆದುಕೊಂಡಿತ್ತು.

ಅದೇ ರೀತಿ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಪಿ.ಕೋದಂಡರಾಮಯ್ಯ, ಬಂಜಗೆರೆ ಜಯಪ್ರಕಾಶ್, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಎಸ್.ಎಂ.ಸದಾನಂದಯ್ಯ, ಸೋಮಗುದ್ದು ರಂಗಸ್ವಾಮಿ, ನುಲೇನೂರು ಶಂಕರಪ್ಪ, ಈಚಘಟ್ಟದ ಸಿದ್ದವೀರಪ್ಪ ಸೇರಿದಂತೆ ಇನ್ನೂ ಅನೇಕರ ನೇತೃತ್ವದಲ್ಲಿ ಚಳವಳಿ ಏರುಮುಖವಾಗಿತ್ತು.

ಇದೇ ವೇಳೆ ಆಗಸ್ಟ್ 8, 2000ರಲ್ಲಿ ಅಗಲಿದ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎಸ್.ಎಂ.ಕೃಷ್ಣ ಹೋರಾಟಗಾರರ ಪ್ರಶ್ನೆಗೆ ತಣ್ಣನೆ ಪ್ರತಿಕ್ರಿಯೆ ನೀಡಿದ್ದರು. "ಬರಡು ಭೂಮಿಯನ್ನು ಹಸಿರನ್ನಾಗಿಸುವ ಮೂಲಕ ಎಸ್ಸೆನ್ ಅವರ ಕನಸು ನನಸು ಮಾಡಿ, ಅವರಿಗೆ ನಿಜವಾದ ಗೌರವ ಸಲ್ಲಿಸಲಾಗುವುದು" ಎಂಬ ಒಂದೇ ವಾಕ್ಯದ ಸಾಲನ್ನು ಎಸ್.ಎಂ.ಕೃಷ್ಣ ಅಂದು
ನುಡಿದಿದ್ದರು.

ಎಲ್ಲ ರಾಜಕಾರಣಿಗಳಂತೆ ಈ ಮಾತು ಕೂಡ ಹುಸಿ ಎಂದೇ ಅಂದು ವಿಶ್ಲೇಷಣೆ ಮಾಡಲಾಗಿತ್ತು. ಆದರೆ, ರಾಷ್ಟ್ರನಾಯಕನ ಪಾರ್ಥಿವ ಶರೀರದ ಬಳಿ ವಾಗ್ದಾನ ಮಾಡಿದ್ದನ್ನು ಜನ ಮರೆತರೂ, ಎಸ್.ಎಂ.ಕೃಷ್ಣ ಮಾತ್ರ ಮರೆಯಲಿಲ್ಲ. ಹೀಗೆ ಕೊಟ್ಟ ಮಾತು ಹುಸಿಗೊಳಿಸದೆ, ಜನ ಹೋರಾಟಕ್ಕೆ ಮನ್ನಣೆ ನೀಡುವ ಮೂಲಕ ಬಯಲುಸೀಮೆ ಚಿತ್ರದುರ್ಗ-ತುಮಕೂರು-ಕೋಲಾರ ಜಿಲ್ಲೆಗಳಿಗೆ ಭದ್ರೆ ನೀರುಣಿಸುವ ಪ್ರಥಮ ಪ್ರಯತ್ನ ಪ್ರಮಾಣಿಕವಾಗಿ ಮಾಡಿದ ಎಸ್.ಎಂ.ಕೃಷ್ಣ ಅಗಲಿಕೆ ಜಿಲ್ಲೆಯ ಮಟ್ಟಿಗೆ ಅತ್ಯಂತ ನೋವುಂಟು ಮಾಡಿದೆ.

ಯೋಜನೆ ಜಾರಿಗೆ ಸರ್ಕಾರಿ ಮುದ್ರೆ: ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳ ಬಯಲುಸೀಮೆ ಪ್ರದೇಶಗಳಿಗೆ ಭದ್ರೆ ನೀರು ಹರಿಸಲು ಅಂದು ಬೃಹತ್ ನೀರಾವರಿ ಸಚಿವರಾಗಿದ್ದ ಎಚ್.ಕೆ.ಪಾಟೇಲ್ ಅವರಿಗೆ ಹೋರಾಟ ಸಮಿತಿ ಸದಸ್ಯರೊಂದಿಗೆ ಹಲವು ಸಭೆಗಳನ್ನು ನಡೆಸಲು ಸೂಚಿಸಿ, ಯೋಜನೆ ಜಾರಿ
ಸಾಧ್ಯತೆ ಕುರಿತು ಮಾಹಿತಿಯನ್ನು ಎಸ್.ಎಂ.ಕೃಷ್ಣ ಸಂಗ್ರಹಿಸಿದ್ದರು. ಬಳಿಕ ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿಯೇ ಮೊದಲ ಬಾರಿಗೆ
ಹೋರಾಟಗಾರರೊಂದಿಗೆ ಸಭೆ ನಡೆಸಿ, ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದೆಂದು ಮಾತು ಕೊಟ್ಟಿದ್ದರು. ಅದರಂತೆ 2004ರ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸುವುದಾಗಿ ಲಿಖಿತವಾಗಿ ದಾಖಲಿಸುವ ಮೂಲಕ ಮೊದಲ ಬಾರಿಗೆ ಯೋಜನೆ ಜಾರಿಗೆ ಸರ್ಕಾರದ ಮುದ್ರೆ ಒತ್ತಿದ ಕೀರ್ತಿ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ.

ಅಸಾಧ್ಯವೆಂಬ ಭಾವನೆ ದೂರ: ಎಸ್.ಎಂ.ಕೃಷ್ಣ ಬಡಜನರ ಪರ ಆಡಳಿತ ನಡೆಸಿದ ವ್ಯಕ್ತಿ. ಅದರಲ್ಲೂ ಬಯಲುಸೀಮೆ ಪ್ರದೇಶಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲು ಬಜೆಟ್‍ನಲ್ಲಿ ಪ್ರಥಮ ಬಾರಿಗೆ ಸೇರ್ಪಡೆ ಮಾಡುವ ಮೂಲಕ ಜನರು, ರಾಜಕಾರಣಿಗಳ ಮನದಲ್ಲಿ ಬೇರೂರಿದ್ದ ಯೋಜನೆ ಜಾರಿ ಅಸಾಧ್ಯವೆಂಬ ಭಾವನೆ ದೂರಗೊಳಿಸಿದ ಮುಖ್ಯಮಂತ್ರಿ. ಅವರು ಬಯಲುಸೀಮೆಗೆ ನೀಡಿದ ಕೊಡುಗೆ ಅಪಾರವೆಂಬುದು ರೈತಸಂಘದ ಅನೇಕ ಮುಖಂಡರ ಅಭಿಪ್ರಾಯ.

ಎಸ್ಸೆನ್ ಜನ್ಮದಿನವೇ ಅಗಲಿಕೆ : ಎಸ್.ನಿಜಲಿಂಗಪ್ಪ ಮತ್ತು ಎಸ್.ಎಂ.ಕೃಷ್ಣ ಮಧ್ಯೆ ಅತ್ಯಂತ ಉತ್ತಮ ಒಡನಾಟವಿತ್ತು. ನಿಜಲಿಂಗಪ್ಪ ರೀತಿಯೇ ರಾಷ್ಟ್ರದಲ್ಲಿ ಮಿಂಚಿದ ಕನ್ನಡಿಗ ಎಂಬ ಹೆಗ್ಗಳಿಕೆ ಕೃಷ್ಣ ಅವರದ್ದಾಗಿತ್ತು. ಇದೇ ಕಾರಣಕ್ಕೆ ಎಸ್ಸೆನ್ ಅವರನ್ನು ಪದೇ ಪದೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು. ಡಾ.ರಾಜ್ ಅಪಹರಣದ ತೀವ್ರ ಸಂಕಷ್ಟದಲ್ಲೂ ಬಿಡುವು ಮಾಡಿಕೊಂಡು ರಾಷ್ಟ್ರನಾಯಕನ
ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಅವರ ಕನಸು ನನಸಾಗಿಸಲು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದರು. ಅವರ ಮೇಲೆ ಅದಮ್ಯ ಪ್ರೀತಿ ಹೊಂದಿದ್ದ ಕೃಷ್ಣ ಅವರು, ನಿಜಲಿಂಗಪ್ಪನವರ ಜನ್ಮದಿನವಾದ ಡಿಸೆಂಬರ್ 10 ರಂದೇ ನಾಡನ್ನು ಅಗಲಿರುವುದು ಕಾಕತಾಳೀಯ.

Tags :
Advertisement