ಜೊತೆಜೊತೆಯಾಗಿ ಧರ್ಮಸ್ಥಳಕ್ಕೆ ಬಂದ ಸಿದ್ದು, ಡಿಕೆಶಿ : ಮಂಜುನಾಥನಿಗೆ ಹರಕೆ ತೀರಿಸಿ, ವಿಶೇಷ ಪೂಜೆ ಮಾಡಿಸಿದ ಸಿಎಂ, ಡಿಸಿಎಂ
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇಬ್ಬರು ಜೊತೆ ಜೊತೆಯಾಗಿಯೇ ಓಡಾಡುವ ಮೂಲಕ ಇಬ್ಬರ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಸಾರಿದ್ದಾರೆ. ಸಿಎಂ ಖುರ್ಚಿಗಾಗಿ ಇಬ್ಬರು ಕಿತ್ತಾಡುತ್ತಾರೆ ಎಂಬ ವಿರೋಧ ಪಕ್ಷದ ಮಾತುಗಳಿಗೆ ಈ ನಡೆ ಬಿಸಿ ಮುಟ್ಟಿಸಿದೆ.
ಇಂದು ಮಧ್ಯಾಹ್ನವೇ ಮೈಸೂರಿನ ವಿಮಾನ ನಿಲ್ದಾಣದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿಂದ ನೇರವಾಗಿ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಗೆ ಹೋದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬರುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಕುಂಭಮೇಳ, ವಾದ್ಯಘೋಷ್ಠಿಗಳು ಸ್ವಾಗತ ಕೋರಿದವು. ಕ್ಷೇತ್ರದ ಪರವಾಗಿ ಹೆಗ್ಗಡೆ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತ ಕೋರಿದರು. ಹರಕೆಯಂತೆ ಡಿಕೆಶಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಎಂದರೆ ಸಿಎಂ ಹಾಗೂ ಡಿಸಿಎಂ ಸಾಂಪ್ರದಾಯಿಕ ಉಡುಗೆಯಲ್ಲಿ, ಭಕ್ತಿ ಭಾವದಿಂದ ಪೂಜಾ ಕೈಂಕರ್ಯ ನೆರವೇರಿಸಿದರು.
ಕಳೆದ ಬಾರಿ ಬಂದಾಗ ಸಿದ್ದರಾಮಯ್ಯ ಅವರು ಮಾಂಸ ತಿಂದು ಧರ್ಮಸ್ಥಳಕ್ಕೆ ಬಂದಿದ್ದರು ಎಂಬ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಆಹಾರ ಎಂಬುದು ಅವರವರ ವೈಯಕ್ತಿಕ ಆಯ್ಕೆ ಎಂದು ಸಪೋರ್ಟ್ ಮಾಡಿದ್ದರೆ ಇನ್ನು ಕೆಲವರು ದೇವಸ್ಥಾನಕ್ಕೆ ಮಾಂಸ ತಿಂದು ಹೋದರಾ..? ಎಂದು ಸಿಎಂ ವಿರುದ್ಧ ಹೌಹಾರಿದ್ದರು. ಆದರೆ ಈ ಬಾರಿ ಆ ಎಲ್ಲಾ ಕಳಂಕದಿಂದ ಸಿಎಂ ಸಿದ್ದರಾಮಯ್ಯ ದೂರ ದೂರ. ಅಚ್ಚುಕಟ್ಟಾಗಿ ಬೆಳಗ್ಗೆ ಒಂದು ದೋಸೆ ತಿಂದು, ದೇವಸ್ಥಾನದ ಸಂಪ್ರದಾಯದಂತೆ ಪಂಚೆ, ಶಲ್ಯ ತೊಟ್ಟು ದೇವರ ದರ್ಶನ ಪಡೆದಿದ್ದಾರೆ.