ದಸರಾದ ಬಾಲ್ಯದ ನೆನಪು ಮೆಲುಕು ಹಾಕಿದ ಸಿದ್ದರಾಮಯ್ಯ
ಮೈಸೂರು: ಇಂದು ದಸರಾಗೆ ಅಧಿಕೃತ ಚಾಲನೆ ಸಿಕ್ಕಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ಚಿಕ್ಕವನಿದ್ದಾಗ ನಮ್ಮಪ್ಪನ ಹೆಗಲ ಮೇಲೆ ಕೂತು ದಸರಾ ನೋಡುತ್ತಿದ್ದೆ. ಆಗ ಮಹಾರಾಜರಿಗೆ ಕೈಮುಗಿದಿದ್ದೆ ಎಂದು ತಮ್ಮ ಬಾಲ್ಯದ ನೆನಪನ್ನು ನೆನಪು ಹಾಕಿದ್ದಾರೆ.
ದೊಡ್ಡವನಾದ ಮೇಲೆ ಪ್ರತಿ ವರ್ಷ ದಸರಾ ನೋಡಿದ್ದೇನೆ. ವಸ್ತುಪ್ರದರ್ಶನಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ದಸರಾ ನಮ್ಮ ಸಂಸ್ಕೃತಿ ಪ್ರತೀಕ. ಹಾಗಾಗಿ ಈ ಮಹೋತ್ಸವ ಸದಾ ಕಾಯಬೇಕು. ನಾಡಹಬ್ಬಕ್ಕೆ ದೊಡ್ಡ ಇತಿಹಾಸವಿದೆ. ಇದು ನಾಡಹಬ್ಬ. 10ನೇ ದಿನ ಜಂಬೂ ಸವಾರಿ ನಡೆಯುತ್ತದೆ. ಅಂದಿಗೆ ಜಂಬೂ ಸವಾರಿ ಮುಕ್ತಾಯಗೊಳ್ಳುತ್ತದೆ.
ವಿಜಯನಗರ ಕಾಲದಿಂದಾನೂ ದಸರಾ ಆಚರಣೆಯಲ್ಲಿದೆ. ಮೈಸೂರು ಅರಸರು ಇದನ್ನು ಮುಂದುವರೆಸಿದ್ದಾರೆ. ಇದೀಗ ರಾಜ್ಯ ಸರ್ಕಾರ ಮುಂದುವರೆಸಿದೆ. ನಾಡಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಜಾತಿ ತಾರತಮ್ಯ ಇರಬಾರದು. ಎಲ್ಲರನ್ನೂ ಗೌರವ ಪ್ರೀತಿಯಿಂದ ಕಾಣಬೇಕಿದೆ. ಭಾರತ ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಸಂವಿಧಾನದ ಉದ್ದೇಶ ಈಡೇರಿಸುವುದು ಪ್ರತಿ ಸರ್ಕಾರದ ಕರ್ತವ್ಯ ಎಂದಿದ್ದಾರೆ.
ಇದೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕನ್ನಡಕ್ಕೆ 50 ವರ್ಷ ಸಂದಿದೆ. ದುಃಖವನ್ನು ದೂರ ಮಾಡುವ ದೇವಿ ಸನ್ನಿಧಾನದಲ್ಲಿ ಇದ್ದೇವೆ. ಇದು ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬ. ಯಾವ ಊರಿಗೆ ಹೋದರೂ ಗ್ರಾಮ ದೇವತೆ ಇರುತ್ತಾಳೆ. ನಾಡಿನ ದೇವತೆ ಚಾಮುಂಡಿ. ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ. ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಿದೆ ಎಂದಿದ್ದಾರೆ.