ಸಿದ್ದರಾಮಯ್ಯಗೆ ಅರಿವು-ಮರೆವು ಶುರುವಾಗಿದೆ : ಹಿಜಾಬ್ ವಿಚಾರಕ್ಕೆ ವಾಗ್ದಾಳಿ ನಡೆಸಿದ ಯತ್ನಾಳ್
ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರು ಇತ್ತಿಚೆಗೆ ಹಿಜಾಬ್ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಹಿಜಾಬ್ ನಿಷೇಧದ ಆದೇಶವನ್ನು ವಾಪಾಸ್ ಪಡೆಯುವ ಬಗ್ಗೆ ಚಿಂತನೆ ನಡರಸಲಾಗಿದೆ ಎಂದು. ಈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
'ಸಿದ್ದರಾಮಯ್ಯ ಅವರಿಗೆ ಅರಿವು - ಮರೆವು ಶುರುವಾಗಿದೆ. ಮೊನ್ನೆಯಷ್ಟೇ ಹಿಜಾಬ್ ನಿಷೇಧ ವಾಪಾಸ್ ಅಂದ್ರು. ನಿನ್ನೆ ಬೇರೆಯದ್ದೆ ಮಾತನಾಡುತ್ತಿದ್ದಾರೆ. ಹಿಜಾಬ್ ನಿಷೇಧ ಆದರೆ, ನಾನೇ ಕೇಸರಿ ಶಾಲು ಹಾಕುವುದಕ್ಕೆ ಕರೆ ನೀಡುತ್ತೇನೆ. ನಮ್ಮ ಹುಡುಗರಿಗೆ ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಹೋಗುವುದಕ್ಕೆ ಸೂಚನೆ ನೀಡುತ್ತೇನೆ. ಸಿದ್ದರಾಮಯ್ಯ ಮತ್ತೆ ಮುಸ್ಲಿಂ ವೋಟ್ ಮೇಲೆ ಗೆಲ್ಲಬೇಕು ಎಂದಿದ್ದಾರೆ. ಅದು ಆಗಲ್ಲ. ತುಷ್ಠಿಕರಣ ಮಾಡಿದರೆ ಬಿಜೆಪಿ ಬರುತ್ತೆ ಅಂತ ಅವರಿಗೂ ಗೊತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿ ಅಂತಾನೇ ಹೀಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ರಾಹುಲ್ ಗಾಂಧಿ ಹುಚ್ಚ. ಪ್ರಧಾನಿಯಾದರೆ ಅವರ ಖುರ್ಚಿಗೂ ಕಂಟಕ ಇದೆ. ಅವರ ಇನ್ನೊಂದು ಎತ್ತು ರೆಡಿ ಇದೆ. ಅದಕ್ಕೆ ಅವರಿಗೂ ಮೋದಿ ಪ್ರಧಾನಿಯಾದರೆ ಒಳ್ಳೆಯದು ಎನ್ನುವ ಭಾವನೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕೆಂದು ವಿಪಕ್ಷಗಳೆಲ್ಲಾ ಪಣ ತೊಟ್ಟಿವೆ. ಅದರ ತಯಾರಿ ಕಾರ್ಯವೂ ನಡೆಯುತ್ತಿದೆ. ಇದರ ನಡವೆ ಹಿಜಾಬ್ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.