ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನ..!
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವುದಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಕೊನೆಗೂ ರಾಜ್ಯ ಸರ್ಕಾರ ಈ ಸಂಬಂಧ ನಿರ್ಧಾರವನ್ನು ಪ್ರಕಟಿಸಿದೆ.
ಸಚಿವ ಸಂಪುಟದ ಬಳಿಕ ಈ ತೀರ್ಮಾನ ತೆಗೆದುಕೊಂಡಿದ್ದು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಶ ಸ್ವೀಕರಿಸಿ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದೆ. ಅಲ್ಲದೇ ಮೂರು ತಿಂಗಳಲ್ಲಿ ವರದಿ ಸಲ್ಲಿಕೆ ಮಾಡಲು ಆಯೋಗಕ್ಕೆ ಸೂಚನೆ ನೀಡಲಾಗುವುದು ಎಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಕಲ್ಪಿಸಲು ಕ್ಯಾಬಿನೆಟ್ ನಿರ್ಣಯ ಮಾಡಿದೆ.
ವರದಿ ಸಲ್ಲಿಸಲು ಗಡುವು ನೀಡಿರುವ ಕಾರಣ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಈಗ ಯಾವುದೇ ನೇಮಕಾತಿ ನಡೆಯುತ್ತಿಲ್ಲ. ನೇಮಕಾತಿ ಸಂಬಂಧ ಆಯೋಗದ ವರದಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯ ಒಳಗಡೆಯೇ ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾ. ಬಿ ಆರ್ ಗವಾಯಿ, ವಿಕ್ರಂ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಒಳ ಮೀಸಲಾತಿ ಕಾನೂನು ಬದ್ಧ ಎಂದು ಹೇಳಿದೆ. ಎಸ್ ಎಂ ಕೃಷ್ಣ ಅವರು ಸಿಎಂ ಆಗಿದ್ದಾಗಲೇ ಒಳ ಮೀಸಲಾತಿಗೆ ಬೇಡಿಕೆ ಇಡಲಾಗಿತ್ತು. ಮೂರು ದಶಕಗಳಿಂದ ಈ ಸಂಬಂಧ ಹೋರಾಟ ನಡೆಯುತ್ತಲೆ ಇದೆ.