6 ವರ್ಷದ ಮುನಿಸು ಮರೆತು ಒಂದಾದ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಪ್ರಚಾರದ ಜೊತೆಗೆ ಹಲವು ಮಹತ್ವದ ಬದಲಾವಣೆಗಳು ನಡೆದಿವೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ನಡುವೆ ಹಳೆಯ ಸ್ನೇಹ ಮುಂದುವರೆದಿದೆ. ಈ ಮಹತ್ವದ ಬೆಳವಣಿಗೆಗೆ ಸಿದ್ದರಾಮಯ್ಯ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಆಪ್ತರಾಗಿದ್ದರು. ಆದರೆ ಕಳೆದ ಆರು ವರ್ಷದಿಂದ ಸಂಸದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಅವರಿಂದ ದೂರ ಉಳಿದಿದ್ದರು. ಇದೀಗ ಆ ಸ್ನೇಹ ಮತ್ತೆ ಚಿಗುರೊಡೆದಿದೆ. ಇಂದು ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಜಯ ಲಕ್ಷ್ಮೀಪುರಂನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ, ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಬಾರಿ ಚರ್ಚೆಯಾಗುತ್ತಿದ್ದು, ಸದ್ಯ ಶ್ರೀನಿವಾಸ್ ಪ್ರಸಾದ್ ಯಾರ ಪರವಾಗಿ ನಿಲ್ಲಬಹುದು ಎಂಬ ಪ್ರಶ್ನೆ ಎದ್ದಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್ ಭೇಟಿಗೂ ಹಲವು ಕಾರಣಗಳಿವೆ. ಈಗಾಗಲೇ ಶ್ರೀನಿವಾಸ್ ಪ್ರಸಾದ್ ಅವರ ಕುಟುಂಬಕ್ಕೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಮಕ್ಕಳು, ಮೊಮ್ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆಯೂ ಮನವರಿಕೆ ಮಾಡಲಾಗಿದೆ. ಕಾಂಗ್ರೆಸ್ ನಿಂದ ಸುನೀಲ್ ಬೋಸ್ ಅವರು ಅಭ್ಯರ್ಥಿಯಾಗಿದ್ದಾರೆ. ಅವರನ್ನು ಗೆಲ್ಲಿಸಿಕೊಂಡು ಬರುವ ಸವಾಲು ಕಾಂಗ್ರೆಸ್ ಗಿದೆ. ಮೈಸೂರು ಭಾಗದಲ್ಲಿ ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳನ್ನು ಕಾಂಗ್ರೆಸ್ ನತ್ತ ಸೆಳೆದರೆ ಕಾಂಗ್ರೆಸ್ ಗೆ ಹೆಚ್ಚು ಲಾಭವಾಗಲಿದೆ. ಮುಂದಿನ ದಿನಗಳಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ, ಮೊಮ್ಮಕ್ಕಳಿಗೆ ಸ್ಥಾನಮಾನ ನೀಡುವ ಭರವಸೆ ನೀಡಿದೆ ಎನ್ನಲಾಗಿದ್ದು, ಈ ಮೂಲಕ ದೋಸ್ತಿ ಮುಂದಿವರೆಸುವ ಇಂಗಿತ ವ್ಯಕ್ಯಪಡಿಸಿದ್ದಾರೆ ಎನ್ನುತ್ತಿವೆ ಮೂಲಗಳು.