ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ನಿಧನ
ಸುದ್ದಿಒನ್ : ಸಹಾರಾ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತಾ ರಾಯ್ (75) ಇನ್ನಿಲ್ಲ. ಮಂಗಳವಾರ ರಾತ್ರಿ 10:30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಸಹಾರಾ ಗ್ರೂಪ್ ಪ್ರಕಟಿಸಿದೆ.
ಅವರು ದೀರ್ಘಕಾಲದಿಂದ ಮೆಟಾಸ್ಟಾಟಿಕ್ ಕ್ಯಾನ್ಸರ್, ಅಧಿಕ ಬಿಪಿ ಮತ್ತು ಮಧುಮೇಹದಿಂದ ಬಳಲುತ್ತಿದ್ದರು.
ಭಾನುವಾರ, ನವೆಂಬರ್ 12 ರಂದು, ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ರಾತ್ರಿ ನಿಧನರಾದರು ಎಂದು ಕಂಪನಿ ತಿಳಿಸಿದೆ.
ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ಅವರಿಗೆ ಪತ್ನಿ ಸ್ವಪ್ನಾ ರಾಯ್ ಮತ್ತು ಇಬ್ಬರು ಪುತ್ರರಾದ ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಇದ್ದಾರೆ. ಸುಬ್ರತಾ ರಾಯ್ ಅವರು ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದರು. ಗೋರಖ್‌ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿದ್ದರು. 1976 ರಲ್ಲಿ, ರಾಯ್ ಅವರು ಆರ್ಥಿಕ ಒತ್ತಡದಲ್ಲಿದ್ದ ಸಹಾರಾ ಫೈನಾನ್ಸ್ ಎಂಬ ಚಿಟ್ ಫಂಡ್ ಕಂಪನಿಯನ್ನು ಖರೀದಿಸಿದರು. 1978 ರ ಹೊತ್ತಿಗೆ ಅದು ಸಹಾರಾ ಇಂಡಿಯಾ ಪರಿವಾರ್ ಆಗಿ ಸುಧಾರಣೆಯಾಯಿತು. ಅದರ ನಂತರ ಅವರು ವ್ಯವಹಾರವನ್ನು ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಹೀಗೆ ಕಂಪನಿಯನ್ನು ವಿಸ್ತರಿಸಿದರು. 1992 ರಲ್ಲಿ, ರಾಷ್ಟ್ರೀಯ ಸಹಾರಾ ಮತ್ತು ಸಹಾರಾ ಟಿವಿ ಚಾನೆಲ್ ಎಂಬ ಸುದ್ದಿ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಕೆಲವು ವರ್ಷಗಳಿಂದ ಸಹಾರಾ ಟಿವಿಯನ್ನು ಸಹಾರಾ ಒನ್ ಎಂದು ಬದಲಾಯಿಸಲಾಯಿತು. 2010 ರಲ್ಲಿ, ರಾಯ್ ಲಂಡನ್‌ನ ಗ್ರೋಸ್ವೆನರ್ ಹೌಸ್ ಹೋಟೆಲ್ ಮತ್ತು 2012 ರಲ್ಲಿ ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್ ಅನ್ನು ಖರೀದಿಸಿದರು. 2000 ರ ದಶಕದಲ್ಲಿ, ಸಹಾರಾ ಇಂಡಿಯಾ ಪರಿವಾರ್ 1.2 ಮಿಲಿಯನ್ ಉದ್ಯೋಗಿಗಳನ್ನು ಹೊಂದಿತ್ತು. ಸಹಾರಾ ಗ್ರೂಪ್ ದೇಶದಲ್ಲಿ ರೈಲ್ವೆ ನಂತರ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿ ಎಂದು ಗುರುತಿಸಲ್ಪಟ್ಟಿದೆ. ಕೇವಲ ರೂ. 2 ಸಾವಿರ ಬಂಡವಾಳದಲ್ಲಿ ಸಹಾರಾ ಆರಂಭಿಸಿ ದೇಶದಲ್ಲೇ ಮುಂಚೂಣಿಯಲ್ಲಿದ್ದೇವೆ ಎಂದು ಕಂಪನಿ ಹೇಳಿದೆ.
ಸಹಾರಾ ಗ್ರೂಪ್ 2014 ರಿಂದ ಸವಾಲುಗಳನ್ನು ಎದುರಿಸುತ್ತಿದೆ. ಹೂಡಿಕೆದಾರರಿಂದ ಸಂಗ್ರಹಿಸಿದ ಕೋಟಿಗಟ್ಟಲೆ ಹಣವನ್ನು ಮರುಪಾವತಿ ಮಾಡಬೇಕೆಂದು ಎಂದು ಸೆಬಿ ಆದೇಶಿಸಿತ್ತು. ಹೂಡಿಕೆದಾರರ ಹಣವನ್ನು ಮರುಪಾವತಿಸಲು ವಿಫಲವಾದ ಕಾರಣ ಸುಪ್ರೀಂ ಕೋರ್ಟ್ ಆದೇಶದ ನಡುವೆ ರೈ ತಿಹಾರ್ ಜೈಲಿಗೆ ಹೋಗಬೇಕಾಯಿತು. ಸದ್ಯ ಅವರು ಪೆರೋಲ್‌ನಲ್ಲಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಸಹಾರಾ ಗ್ರೂಪ್ ಪ್ರಕಟಿಸಿದೆ.