ರೇಣುಕಾಸ್ವಾಮಿ ಕೊಲೆ ಕೇಸ್ : ದರ್ಶನ್ ನೀಡಿದ್ದ ಭಗವದ್ಗೀತೆ ಹಿಡಿದು ಜೈಲಿನಿಂದ ಹೊರ ಬಂದ ಅನುಕುಮಾರ್..!
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಏಳನೇ ಆರೋಪಿಯಾಗಿದ್ದ ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ ಜೈಲಿನಿಂದ ಹೊರಗೆ ಬರುವಾಗ ಆತ ತನ್ನ ಕೈನಲ್ಲಿ ಹಿಡಿದಿದ್ದ ಭಗವದ್ಗೀತೆ ಪುಸ್ತಕ ಎಲ್ಲರ ಗಮನ ಸೆಳೆದಿದೆ. ಈ ಭಗವದ್ಗೀತೆ ಪುಸ್ತಕವನ್ನು ನಟ ದರ್ಶನ್ ನೀಡಿದ್ದರಂತೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವಾಗ ದರ್ಶನ್ ಆ ಪುಸ್ತಕವನ್ನು ಅನುಕುಮಾರ್ ಅವರಿಗೆ ನೀಡಿದ್ದರಂತೆ. ಇಲ್ಲಿಯವರೆಗೂ ಆ ಪುಸ್ತಕವನ್ನು ಅನುಕುಮಾರ್ ಜೋಪಾನವಾಗಿಟ್ಟುಕೊಂಡಿದ್ದರಂತೆ.
ಅನುಕುಮಾರ್ ಅವರಿವೆ ಕಳೆದ ಶುಕ್ತವಾರವೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿರಲಿಲ್ಲ. ಹೀಗಾಗಿ ಇಂದು ರಿಲೀಸ್ ಆಗಿದ್ದಾರೆ. ಷರತ್ತು ಬದ್ಧ ಜಾಮೀನಿಗೆ ಶ್ಯೂರಿಟಿ ಕೂಡ ಹಾಕಬೇಕಿದ್ದದ್ದರಿಂದ ಇಂದು ಬಿಡುಗಡೆಯಾಗಿದ್ದಾರೆ. ಭಗವದ್ಗೀತೆ ಪುಸ್ತಕದೊಂದಿಗೆ ಜೈಲಿನಲ್ಲಿ ಕಾಲ ಕಳೆದಿದ್ದ ಅನುಕುಮಾರ್, ತನ್ನ ಸಹೋದರ ಜೊತೆಗೆ ಜೈಲಿನಿಂದ ತೆರಳಿದ್ದಾರೆ.
ಅತ್ತ ಶಿವಮೊಗ್ಗ ಜೈಲಿನಲ್ಲಿದ್ದ ಆರನೇ ಆರೋಪಿ ಜಗದೀಶ್ ಕೂಡ ಬಿಡುಗಡೆಯಾಗಿದ್ದಾನೆ. ಶಿವಮೊಗ್ಗ ಕಾರಾಗೃಹದಿಂದ ಬುಧವಾರ ಸಂಜೆ ವೇಳೆಗೆ ರಿಲೀಸ್ ಆಗಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನ ಕೋರ್ಟ್ ನಲ್ಲಿ ಜಾಮೀನು ಪ್ರಕ್ರಿಯೆ ಮುಗಿದಿದ್ದರಿಂದ ಸಂಜೆ ವೇಳೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಜಗದೀಶ್ ರನ್ನು ಕರೆದುಕೊಂಡು ಹೋಗಲು ಅವರ ತಮ್ಮ ಜೈಲಿನ ಬಳಿ ಬಂದಿದ್ದರು. ಮಾಧ್ಯಮದವರ ಕಣ್ಣಿಂದ ತಪ್ಪಿಸಿಕೊಂಡು ಚಿತ್ರದುರ್ಗಕ್ಕೆ ಹೋಗಿದ್ದಾರೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈಗಾಗಲೇ ಏಳು ಜನರಿಗೆ ಜಾಮೀನು ನೀಡಿದೆ. ಆದರೆ ಕಾನೂನು ಪ್ರಕ್ರಿಯೆ ಮುಗಿಸಿ ಒಬ್ಬೊಬ್ಬರೇ ಹಿರಗೆ ಬರುತ್ತಿದ್ದಾರೆ.