ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ರಘು ತಾಯಿ ನಿಧನ..!
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಎ4 ಆರೋಪಿಯಾಗಿರುವ ರಘು ತಾಯಿ ಇಂದು ನಿಧನರಾಗಿದ್ದಾರೆ. ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದ ರಘು, ರೇಣುಕಾಸ್ವಾಮಿಯನ್ನು ಹುಡುಕಿ ಕರೆ ತಂದಿದ್ದ. ಮಗ ಜೈಲು ಸೇರಿದ ಕೊರಗಿನಲ್ಲಿಯೇ ತಾಯಿ ಮಂಜುಳಾ ನಿಧನರಾಗಿದ್ದಾರೆ.
ಚಿತ್ರದುರ್ಗದ ಕೋಳಿ ಬುರುಜಹಟ್ಟಿ ನಿವಾಸದಲ್ಲಿ 65 ವರ್ಷದ ಮಂಜುಳ ನಿಧನರಾಗಿದ್ದಾರೆ. ರಘು ಮನೆಗೆ ಒಬ್ಬನೇ ವಾರಸುದಾರನಾಗಿದ್ದ. ಇದ್ದೊಬ್ಬ ಮಗ ಹೀಗೆ ಜೈಲು ಸೇರಿ ಕುಳಿತರೆ ಯಾವ ತಂದೆ ತಾಯಿಗೆ ಆದರೂ ಆತಂಕವಾಗುವುದಿಲ್ಲವೇ, ಚಿಂತೆಯಾಗುವುದಿಲ್ಲವೇ. ಈ ಕೇಸಲ್ಲಿ ಹೈಪ್ರೊಫೈಲ್ ಇರುವಂತ ದರ್ಶನ್ ಅವರೇ ಜಾಮೀನು ತೆಗೆದುಕೊಳ್ಳುವುದಕ್ಕೆ ಆಗಿಲ್ಲ. ಇನ್ನು ಮಗನನ್ನು ಕಾಪಾಡುವುದು ಯಾರು, ಬಿಡಿಸುವುದು ಯಾರು ಎಂಬ ಚಿಂತೆಯಲ್ಲಿಯೇ ಮಂಜುಳಾ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ತಾಯಿಯ ಅಂತ್ಯ ಸಂಸ್ಕಾರ ಮಾಡುವುದಕ್ಕೆ ರಘು ಕಳುಹಿಸಿಕೊಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಇನ್ನು ಇದೇ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರದುರ್ಗದ ಇನ್ನೊಬ್ಬ ಆರೋಪಿ ಅನಿಲ್ ಎಂಬಾತನ ತಂದೆಯೂ ಕೆಲ ದಿನಗಳ ಹಿಂದೆ ತೀರಿಕೊಂಡಿದ್ದರು. ಈಗ ಮಗನ ಕೊರಗಿನಲ್ಲೇ ರಘು ತಾಯಿ ಕೂಡ ತೀರಿಕೊಂಡಿದ್ದಾರೆ. ಆರೋಪಿಗಳೆಲ್ಲಾ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಾ ಕೂತಿದ್ದಾರೆ.
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಕ್ರೂರವಾಗಿ ಕೊಂದಿರುವ ಆರೋಪದ ಮೇಲೆ ದರ್ಶನ್ ಸೇರಿದಂತೆ ಹದಿನೇಳು ಮಂದಿ ಜೈಲಿನಲ್ಲಿಯೇ ಇದ್ದಾರೆ. ಜುಲೈ 18ಕ್ಕೆ ನ್ಯಾಯಾಂಗ ಬಂಧನ ಮುಕ್ತಾಯವಾಗಿತ್ತು. ಮತ್ತೆ ವಿಚಾರಣೆ ನಡೆಸಿದ ಕೋರ್ಟ್ ಆಗಸ್ಟ್ 1ರ ತನಕ ಮ್ಯಾಯಾಂಗ ಬಂಧನ ವಿಸ್ತರಿಸಿದೆ.