Ratan tata : ದಿಗ್ಗಜ ಉದ್ಯಮಿ ರತನ್ ಟಾಟಾ ವಿಧಿವಶ
ಸುದ್ದಿಒನ್, ಅಕ್ಟೋಬರ್. 10 : ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ಟಾಟಾ (86) ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಂಬೈನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರತನ್ ಟಾಟಾ ಅವರ ಮರಣವನ್ನು ಹರ್ಷ ಗೋಯೆಂಕಾ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ರತನ್ ಟಾಟಾ ಅವರು ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶೇಷ ಛಾಪನ್ನು ಮೂಡಿಸಿದ್ದರು. ವ್ಯಾಪಾರದಲ್ಲಿ ಮಾತ್ರವಲ್ಲದೆ ಪರೋಪಕಾರಿಯಲ್ಲೂ ರತನ್ ಟಾಟಾ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ರತನ್ ಟಾಟಾ ಬಹಳ ಉದಾರ ವ್ಯಕ್ತಿ. ಅವರು 28 ಡಿಸೆಂಬರ್ 1937 ರಂದು ಜನಿಸಿದರು. ವಿದೇಶದಲ್ಲಿ ಅಧ್ಯಯನವನ್ನು ಮುಗಿಸಿದ ನಂತರ, ರತನ್ ಟಾಟಾ ಮೊದಲು ಟಾಟಾ ಗ್ರೂಪ್ ಕಂಪನಿಯಾದ ಟಾಟಾ ಇಂಡಸ್ಟ್ರೀಸ್‌ನಲ್ಲಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ ಜಮ್ಶೆಡ್‌ಪುರದ ಟಾಟಾ ಪ್ಲಾಂಟ್‌ನಲ್ಲಿ ಕೆಲವು ತಿಂಗಳು ತರಬೇತಿ ಪಡೆದರು. ತರಬೇತಿ ಮುಗಿಸಿ ರತನ್ ಟಾಟಾ ಅವರು ತಮ್ಮ ಜವಾಬ್ದಾರಿಯನ್ನು ಆರಂಭಿಸಿದರು. ರತನ್ ಟಾಟಾ, ಟಾಟಾ ಗ್ರೂಪ್ ಅನ್ನು ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಮಾರ್ಚ್ 1991 ರಿಂದ ಡಿಸೆಂಬರ್ 2012 ರವರೆಗೆ ಮುನ್ನಡೆಸಿದರು. 2008 ರಲ್ಲಿ, ರತನ್ ಟಾಟಾ ಅವರಿಗೆ ಭಾರತ ಸರ್ಕಾರವು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು.