ರಾಜ್ಯಸಭಾ ಚುನಾವಣೆ : ಅಡ್ಡಮತದಾನದ ಆತಂಕದಲ್ಲಿ ಕಾಂಗ್ರೆಸ್..!
ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತ ಹೊಂದಿದೆ. ಆದರೂ ಇಂದಿನ ಬೆಳವಣಿಗೆ ಕಾಂಗ್ರೆಸ್ ಗೆ ಅಡ್ಡಮತದಾನದ ಆತಂಕ ಶುರುವಾಗಿದೆ. ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಈಗ ಶಾಸಕರು ಅಡ್ಡ ಮತದಾನ ಮಾಡಲಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಮೂಲಕ ಚುನಾವಣೆ ಎದುರಿಸಲಿದೆ. ಇದೀಗ ರಾಜ್ಯಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರೆಸಿದೆ. ಕಡೆ ಗಳಿಗೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಐದನೇ ಅಭ್ಯರ್ಥಿಯಾಗಿ ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ವಿಧಾನಸಭೆಯಲ್ಲಿ 66 ಸದಸ್ಯ ಬಲವನ್ನು ಹೊಂದಿದೆ. ಹೀಗಾಗಿ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕೆ ಇಳಿಸಿದ್ದು, ಹೊಸ ಲೆಕ್ಕಚಾರ ಶುರುವಾಗಿದೆ. ಬಿಜೆಪಿಗೆ ತನ್ನ ಅಭ್ಯರ್ಥಿ ಗೆಲ್ಲಿಸಿದರು 20 ಮತಗಳು ಉಳಿಯುತ್ತವೆ. ಜೆಡಿಎಸ್ 19 ಶಾಸಕರು ಇದ್ದಾರೆ. ನಾಲ್ವರು ಪಕ್ಷೇತರರು ಕುಪೇಂದ್ರ ರೆಡ್ಡಿ ಬೆಂಬಲಿಸಿದರು.
ಕಾಂಗ್ರೆಸ್ ನ ಐದು ಶಾಸಕರು ಅಡ್ಡಮತದಾನದ ಮಾಡಿದರೆ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಖಚಿತ. ಇದೇ ಕಾರಣಕ್ಕೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಈ ಅಡ್ಡಮತದಾನವನ್ನು ತಡೆಯುವುದಕ್ಕೆ ಕಾಂಗ್ರೆಸ್ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ ಶಾಸಕರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗುವ ಚಿಂತನೆಯನ್ನು ನಡೆಸಿದೆ ಎಂದಿದ್ದಾರೆ.