ರಾಜ್ಯದಲ್ಲಿ ಮಳೆ ಆರಂಭ: ಶಿವಮೊಗ್ಗದಲ್ಲಿ ಒಬ್ಬ ಸಾವು, ದಾವಣಗೆರೆಯಲ್ಲಿ 25 ಮೇಕೆ ಸಾವು : ಎಲ್ಲೆಲ್ಲಿ ಏನೇನು ಅನಾಹುತ..?
ಬೆಂಗಳೂರು: ರಾಜ್ಯಾದ್ಯಂತ ಮಳೆ ಭರ್ಜರಿಯಾಗಿ ಸುರಿಯುತ್ತಿದೆ. ಎಲ್ಲೆಡೆ ಸಂಪಾಗಿ ಮಳೆ ಬರುತ್ತಿದೆ. ಕಳೆದ ಬಾರಿ ಹಿಂಗಾರು-ಮುಂಗಾರು ಕೈಕೊಟ್ಟ ಕಾರಣಕ್ಕೆ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದರು. ಇದೀಗ ಮಳೆ ಆರಭವಾಗಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಇನ್ನೊಂದೆ ಸಂಕಟವನ್ನು ತಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತೊರೆಬೈಲು ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಭಾರಿ ಮಳೆ-ಗಾಳಿಗೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಮಳೆಗೆ ಅಕೇಶಿಯಾ ಮರ ಬಿದ್ದು 64 ವರ್ಷದ ಜಯಂತ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇನ್ನು ದಾವಣಗೆರೆಯ ಆನಗೋಡು ಸಮೀಪದ ಈಚಘಟ್ಟದಲ್ಲಿ ಸಿಡಿಲಿಗೆ ಮೇಕೆಗಳು ಸಾವನ್ನಪ್ಪಿವೆ. ಸಿಡಿಲು ಬಡಿದು 16 ಹೆಣ್ಣುಮೇಕೆ, 9 ಗಂಡು ಮೇಕೆ ಸೇರಿ 25 ಮೇಕೆಗಳು ಸಾವನ್ನಪ್ಪಿವೆ. ಈ ಮೂಲಕ ಅಂದಾಜು ಐದು ಲಕ್ಷ ರೂಪಾಯಿ ನಷ್ಟವಾಗಿದೆ. ಈ ಮೇಕೆಗಳು ರೈತ ಮಹಿಳೆ ರೇವಣಿಭಾಯಿ ಪಾಪ್ಯಾನಾಯ್ಕ ಅವರಿಗೆ ಸೇರಿದ ಮೇಕೆಗಳಾಗಿವೆ. ಶಾಸಕ ಕೆ ಎಸ್ ಬಸವಂತಪ್ಪ ಹಾಗೂ ಕಂದಾಯ ಅಧಿಕಾರಿ ಹಾಗೂ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಇನ್ನು ನಿನ್ನೆ ಸುರಿದ ಮಳೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ರಸ್ತೆಯುದ್ಧಕ್ಕೂ ಮಳೆ ನೀರು ತುಂಬಿ ಹರಿದಿದೆ. ವಾಹನ ಸವಾರರು ಪರದಾಟ ನಡೆಸಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಯೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಗದಗ-ಬೆಟಗೇರಿಯಲ್ಲಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಚಾಮರಾಜನಗರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೊದಲ ಮಳೆಯಾಗಿದೆ.